ಮೈಸೂರು: ರಾಜ್ಯದಲ್ಲಿರುವ 5700ಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ತಂತ್ರಾಂಶ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ 40 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ ಎಂದು ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು. ಮೈಸೂರಿನಲ್ಲಿ ನಡೆದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮತ್ತಷ್ಟು ಅಧಿಕಾರ ನೀಡಲು ಒಂದೇ ಮಾಡೆಲ್ ಬೈಲಾ ತರಲಾಗುತ್ತಿದೆ. ಇದರಿಂದ ಪೆಟ್ರೋಲ್ ಬಂಕ್ , ಕಲ್ಯಾಣ ಮಂಟಪ ಆರಂಭದ ಜೊತೆಗೆ ಹಲವು ರೀತಿಯ ಆರ್ಥಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ವಿತರಣೆ:33 ಲಕ್ಷ ರೈತರಿಗೆ 24 ಸಾವಿರ ಕೋಟಿ ರೂ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ. ಇದರಲ್ಲಿ 3 ಲಕ್ಷ ಹೊಸ ರೈತರಿಗೆ ಸಾಲ ನೀಡಲಾಗುತ್ತಿದೆ. ಸಾಲ ಮಿತಿ ಹೆಚ್ಚಿಸಬೇಕೆಂಬ ಬೇಡಿಕೆಗನುಗುಣವಾಗಿ ಈ ಸಾಲಿನ ಬಜೆಟ್ ನಲ್ಲಿ ಸಾಲ ವಿತರಣೆ ಮೊತ್ತವನ್ನು 3 ಲಕ್ಷ ರೂ. ರಿಂದ 5 ಲಕ್ಷ ರೂ ಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಶೂನ್ಯ ಬಡ್ಡಿ ದರದಲ್ಲಿ ಸಾಲ:ರಾಜ್ಯಾದ್ಯಂತ ರೈತರಿಗೆ ಹಲವು ಅನುಕೂಲ ಕಲ್ಪಿಸಲಾಗಿದೆ. ಸಾಲಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಒಂದೇ ಬ್ಯಾಂಕ್ ನಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತದೆ. ರೈತರ ಆರೋಗ್ಯದ ಹಿತದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಲಾಗಿದೆ. ಯಶಸ್ವಿನಿ ಯೋಜನೆ ನೋಂದಣಿ ಅವಧಿಯನ್ನು ಮಾ.31ರ ವರೆಗೆ ವಿಸ್ತರಿಸಲಾಗಿದೆ ಎಂದರು.
ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ:ಪ್ರತಿ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಆಯೋಜಿಸಲಾಗುವುದು. ಚಿತ್ರದುರ್ಗ, ತುಮಕೂರು ನಂತರ ಮೈಸೂರಿನಲ್ಲಿ ಮೂರನೇ ಕಾರ್ಯಕ್ರಮ ಇದಾಗಿದೆ. ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದ್ದು, ಫಲಾನುಭವಿಗಳ ಬಗ್ಗೆ ಸಿಎಂ ವಿಶೇಷ ಗಮನ ಹರಿಸಿದ್ದಾರೆ. ಜನಸಾಮಾನ್ಯರ ನೋವಿಗೆ, ಕಷ್ಟಕ್ಕೆ ಸ್ಪಂದಿಸುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು. ಫಲಾನುಭವಿಗಳಿಗೆ ಸರ್ಕಾರದಿಂದ ಬಿಡುಗಡೆ ಆದ ಹಣ ನೂರಕ್ಕೆ ನೂರರಷ್ಟು ತಲುಪಬೇಕು. ಸರ್ಕಾರದ ಎಲ್ಲಾ ಸವಲತ್ತುಗಳು ಸಿಗಬೇಕು. ಯಾರಿಗೂ ತೊಂದರೆ ಆಗಬಾರದೆಂಬ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
54 ಲಕ್ಷ ರೈತರಿಗೆ ವಾರ್ಷಿಕ 10 ಸಾವಿರ ಸಹಾಯ ಧನ: ನಮ್ಮದು ಬಡವರು, ದೀನ ದಲಿತರು ಹಾಗೂ ಕಾರ್ಮಿಕರ ಪರವಾದ ಸರ್ಕಾರ. ರಾಜ್ಯದ 54 ಲಕ್ಷ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಾರ್ಷಿಕ 10 ಸಾವಿರ ಸಹಾಯ ಧನವನ್ನು ರೈತರ ಖಾತೆಗಳಿಗೆ ನೇರವಾಗಿ ನೀಡಲಾಗುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಜಿಲ್ಲಾಡಳಿತದಿಂದ ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರ 6 ಸಾವಿರ ಹಾಗೂ ರಾಜ್ಯ ಸರ್ಕಾರ 4 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಮೈಸೂರು ಜಿಲ್ಲೆಯ ಜನತೆ ಸರ್ಕಾರದ ಒಂದಿಲ್ಲ ಒಂದು ಸೌಲಭ್ಯ ಪಡೆದಿರುವುದು ನಮ್ಮ ಸರ್ಕಾರಕ್ಕೆ ಸಂತಸ ತಂದಿದೆ. ಮುಂದೆಯೂ ನಮ್ಮ ಸರ್ಕಾರವು ಬಡವರ ಪರ ನೊಂದವರ ಪರ ಕೆಲಸ ನಿರ್ವಹಿಸುವ ಸಂಕಲ್ಪ ಹೊಂದಿದ್ದೇವೆ ಎಂದು ತಿಳಿಸಿದರು.
ಶಾಸಕರಾದ ನಾಗೇಂದ್ರ, ರಾಮದಾಸ್, ಹರ್ಷವರ್ಧನ್, ಮೇಯರ್ ಶಿವಕುಮಾರ್ ಸೇರಿದಂತೆ ನಾನಾ ನಿಗಮ ಮಂಡಳಗಳ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.