ಮೈಸೂರು: ಹುಲಿಗಳ ಸಂತತಿ ಹೆಚ್ಚಾಗುತ್ತಿರುವ ಹಿನ್ನಲೆ ಬಂಡೀಪುರ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಗಳನ್ನು ವಿಸ್ತರಿಸಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಹುಣಸೂರು, ಗುಂಡ್ಲುಪೇಟೆ ಹಾಗೂ ಹೆಚ್.ಡಿ. ಕೋಟೆ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ಆಗಾಗ ಹುಲಿಗಳು ಕಾಣಿಸಿಕೊಂಡು ಜನ-ಜಾನುವಾರುಗಳನ್ನು ಬಲಿ ಪಡೆದಿವೆ. ಹೀಗಾಗಿ ಸ್ಥಳೀಯರಿಗೆ ವ್ಯಾಘ್ರಗಳ ಉಪಟಳ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಬಫರ್ ಪ್ರದೇಶ ವ್ಯಾಪ್ತಿಯಲ್ಲಿ ನಾಗರಹೊಳೆ ಹಾಗೂ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವಿಸ್ತರಣೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ.
ನಾಗರಹೊಳೆ ವ್ಯಾಪ್ತಿಗೆ ಬರುವ ಹುಣಸೂರು, ಪಿರಿಯಾಪಟ್ಟಣ ತಾಲೂಕುಗಳಲ್ಲಿ 600 ಎಕರೆ ಪ್ರದೇಶವನ್ನು ಹಾಗೂ ಗುಂಡ್ಲುಪೇಟೆ ಪ್ರದೇಶದಲ್ಲಿ 150 ಎಕರೆ ಪ್ರದೇಶವನ್ನು ಬಫರ್ ವಲಯವೆಂದು ಈಗಾಗಲೇ ಗುರುತಿಸಲಾಗಿದೆ. ಅವಶ್ಯಕತೆ ಬಿದ್ದಾಗ ಪ್ರಾಣಿಗಳ ಅನುಕೂಲಕ್ಕಾಗಿ ಈ ಬಫರ್ ಪ್ರದೇಶದ ವ್ಯಾಪ್ತಿಯಲ್ಲಿ ಕಾಡುಗಳನ್ನು ವಿಸ್ತರಣೆ ಮಾಡಲಾಗುತ್ತದೆ.
ಈ ಹಿಂದೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹುಂಡಿಪುರ ಹಾಗೂ ಚೌಡಹಳ್ಳಿ ಕಾಡಂಚಿನ ಗ್ರಾಮದಲ್ಲಿ ನರಭಕ್ಷಕ ಹುಲಿ ಇಬ್ಬರು ರೈತರನ್ನು ತಿಂದು ಹಾಕಿತ್ತು. ಇನ್ನು ಅಂತರಸಂತೆಯಿಂದ ಇಲ್ಲಿಗೆ ಬಂದಿದ್ದ ಹುಲಿಗಳು, ತಮ್ಮ ವ್ಯಾಪ್ತಿಯ ವಿಸ್ತರಣೆಗಾಗಿ ಆಗಾಗ ಸ್ಥಳಾಂತರ ಮಾಡುತ್ತಿರುವೆ ಎಂದು ಅರಣ್ಯಾಧಿಕಾರಿಗಳೇ ಮಾಧ್ಯಮಗಳೆದುರು ಹೇಳಿಕೆ ಕೊಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ, ದಿನದಿಂದ ದಿನಕ್ಕೆ ಹುಲಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಅವುಗಳ ಅವಾಸ ಸ್ಥಾನವು ವಿಸ್ತರಣೆಯಾಗಬೇಕು. ಇಲ್ಲವಾದರೆ ಹುಲಿಗಳಿಗೆ ಮತ್ತು ಮನುಷ್ಯರಿಗೆ ಸಂಕಷ್ಟ ಎದುರಾಗುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.