ಮೈಸೂರು: ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಂಪ್ರದಾಯಿಕ ದಸರಾಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ನಾಡಹಬ್ಬ ದಸರಾಗೆ ಚಾಮುಂಡಿ ಬೆಟ್ಟದ ವೇದಿಕೆಯಲ್ಲಿನ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾಗೆ ವಿದ್ಯುಕ್ತ ಚಾಲನೆಯನ್ನು ಗಣ್ಯರು, ಶುಭ ಲಗ್ನ 10:15 ರಿಂದ 10:36 ರ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಲಾಯಿತು.
ಚಾಮುಂಡಿ ಬೆಟ್ಟದ ವೇದಿಕೆ ಕಾರ್ಯಕ್ರಮದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ದಸರಾ ಉದ್ಘಾಟಕರಾದ ಹಂಸಲೇಖ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ನಾಡ ಹಬ್ಬಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಯ ಮೂಲ ಮೂರ್ತಿಗೆ ಪೂಜೆ ಸಲ್ಲಿಸಿ, ವೇದಿಕೆಗೆ ಆಗಮಿಸಿದ ಗಣ್ಯರು ದಸರಾ ಉದ್ಘಾಟಕರಾದ ನಾದಬ್ರಹ್ಮ ಹಂಸಲೇಖ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ನಾದಬ್ರಹ್ಮ ಹಂಸಲೇಖ, ಪೂಜ್ಯ ಕನ್ನಡಿಗರಿಗೆ, ಪೂಜ್ಯ ಕನ್ನಡಕ್ಕೆ, ದೇವಾಲಯ, ಪ್ರೇಮಾಲಯಕ್ಕೆ ನನ್ನ ಶರಣು ಎಂದು ತಮ್ಮ ಭಾಷಣವನ್ನು ಆರಂಭಿಸಿದರು. ನನಗೆ ದಸರಾ ಉದ್ಘಾಟನೆಗು ಮುನ್ನ ಅನೇಕರು ಸಲಹೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ವಾಸ ಮಾಡುವ ಎಲ್ಲರೂ ಕನ್ನಡಿಗರೇ. ಯಾರಿಗೆ ಕನ್ನಡ ಗೊತ್ತಿಲ್ಲ ಅನ್ನೋದರ ಬಗ್ಗೆ ಸಮೀಕ್ಷೆ ಆಗಬೇಕು. ಸರ್ವ ಸರ್ಕಾರ ಸಾರ್ವಜನಿಕರು ಈ ಸಮೀಕ್ಷೆಗೆ ಒತ್ತಾಸೆ ನೀಡಬೇಕು. ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ 30ದಿನದಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮ ಆಗಬೇಕು. ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು. ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಕನ್ನಡ ನಮ್ಮ ಶೃತಿ ಆಗಬೇಕು, ಅದರ ಅಭಿವೃದ್ಧಿ ನಮ್ಮ ಕೃತಿ ಆಗಬೇಕು. ನಮ್ಮ ಕಾವೇರಿಗೆ ಒಂದು ಮಿತಿಯಿದೆ. ಕನ್ನಡದ ಭಾಷೆಗೆ ಒಂದು ಮಿತಿಯಿದೆ. ಅದರ ಭಾವಕ್ಕೆ ಎಲ್ಲಿ ಮಿತಿಯಿದೆ. ನಮಗೆ ದೆಹಲಿ ಬೇಕು, ದೆಹಲಿಗೂ ನಾವು ಬೇಕು. ದೆಹಲಿಗೆ ಯಾಕೋ ಕನ್ನಡ ಬೇಡ ಅನ್ನಿಸುತ್ತಿದೆ. ಅದರ ಚಿಂತೆ ಈಗ ಬೇಡ. ಕನ್ನಡವನ್ನು ನಾವು ಪ್ರಪಂಚದ ವೇದಿಕೆಯಲ್ಲಿ ಪರಿಚಯ ಮಾಡಬೇಕು ಎಂದು ಕನ್ನಡ ಭಾಷೆಯ ಉಳಿವು, ಅಭಿವೃದ್ಧಿ ಬಗ್ಗೆ ಮಾತನಾಡಿದರು.
ಬಳಿಕ, ಕರ್ನಾಟಕ ಏಕೀಕರಣಕ್ಕೂ, ನನ್ನ ಕಲಾ ಕಾಯಕಕ್ಕೂ ಐದು ದಶಕವಿದೆ. ನನ್ನ ಈ ಐದು ದಶಕದ ಕಾಯಕದಲ್ಲಿ ದಸರಾ ಉದ್ಘಾಟನೆ ಬಹಳ ಬೆಲೆ ಬಾಳುವಂತದ್ದು. ನಾನು ಈ ಅವಕಾಶಕ್ಕಾಗಿ ಸುಮ್ಮನೆ ಬಂದಿಲ್ಲ. ನಾನು ಸಾವಿರಾರು ಮೆಟ್ಟಿಲು ಹತ್ತಿ ಇಲ್ಲಿ ಬಂದಿದ್ದೇನೆ. ನನಗೆ ನೀಡಿದ ಈ ಅವಕಾಶಕ್ಕೆ ಯಾರನ್ನೂ ಮೊದಲು ನೆನೆಯಲಿ ಅಪ್ಪ ಗೋವಿಂದರಾಜು, ಅಮ್ಮ ರಾಜಮ್ಮನನ್ನೇ, ಗುರು ನೀಲಕಂಠನನ್ನೇ, ಸಂವಿಧಾನವನ್ನೇ, ಸಂವಿಧಾನದ ಗುಡ್ ಶಫರ್ಡ್ ಸಿಎಂ ಸಿದ್ದರಾಮಯ್ಯ ಅವರನ್ನೇ, ಸಂಘಟಕ ಡಿಸಿಎಂ ಶಿವಕುಮಾರ್ ಅವರನ್ನೆ, ಹೆಂಡ್ತಿ ಮಕ್ಕಳನ್ನೆ, ಜನರನ್ನೆ, ಈ ಭೂಮಿ ತಾಯಿಯನ್ನೇ ನಾನು ಈ ಅವಕಾಶಕ್ಕೆ ಯಾರನ್ನ ನೆನೆಯಲಿ ಎಂದು ಮನದಾಳದಿಂದ ಸಾರ್ಥಕ ಭಾವದಿಂದ ಸಂತಸ ವ್ಯಕ್ತಪಡಿಸಿದರು.
ಮುಂದುವರೆದು, ಇಲ್ಲಿ ನಿಂತು ಭೂಮಿ ತಾಯಿಯನ್ನು ಒಂದು ಘಳಿಗೆ ನೆನೆಯುತ್ತೇನೆ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದು ಈ ರೀತಿ ಧನ್ಯವಾದ ಹೇಳೋದು ನಮ್ಮ ಸಿನಿಮಾದವರ ಕೆಲಸ. ನನ್ನಂಥಹ ಸಾಮಾನ್ಯ ವ್ಯಕ್ತಿ ಕೈಯಲ್ಲಿ ದಸರಾ ಉದ್ಘಾಟನೆ ಮಾಡಿಸುವುದು ಸಿಎಂ ಆಸೆ ಆಗಿತ್ತು ಎಂದರು. 50 ವರ್ಷಗಳು ನನ್ನ ಸಾಧನೆಗೆ ಕಾರಣರಾದವರನ್ನು, ಭೂಮಿ ತಾಯಿಯನ್ನು ನೆನೆದಿದ್ದೇನೆ ಎಂದರು. ಇದಾದ ಬಳಿಕ ದಸರಾ ಹಬ್ಬದ ಉದ್ಘಾಟಕರಾದ ನಾದಬ್ರಹ್ಮ ಹಂಸಲೇಖರಿಗೆ ವೀಣಾಧಾರಿಯಾದ ಸರಸ್ವತಿಯ ಗಂಧದ ವಿಗ್ರಹ ನೀಡಿ ಗೌರವ ಸಲ್ಲಿಸಲಾಯಿತು.
ಇದನ್ನೂ ಓದಿ: ವಿಶ್ವವಿಖ್ಯಾತ ಮೈಸೂರು ದಸರಾಗೆ ಕ್ಷಣಗಣನೆ.. ನಾದಬ್ರಹ್ಮ ಹಂಸಲೇಖರಿಂದ ಉದ್ಘಾಟನೆ