ಮೈಸೂರು: ''ಐದು ವರ್ಷ ಮುಖ್ಯಮಂತ್ರಿ ಆಗಿದ್ದವರು, ಎರಡು ಬಾರಿ ಉಪ ಮುಖ್ಯಮಂತ್ರಿ ಆಗಿದ್ದವರು ಹಾಗೂ 13 ಬಜೆಟ್ ಮಂಡನೆ ಮಾಡಿರುವವರು, ಒಂದು ಸುರಕ್ಷಿತ ವಿಧಾನಸಭಾ ಕ್ಷೇತ್ರವನ್ನು ಹುಡುಕಿಕೊಳ್ಳಲು ಆಗುತ್ತಿಲ್ಲ ಎಂಬುದನ್ನು ನೋಡಿದರೆ ನಗು ಬರುವುದಿಲ್ಲ, ಅನುಕಂಪ ಬರುತ್ತದೆ. ಅನುಭವಿ ರಾಜಕಾರಣಿಯವರು ಅವರೇ ಸೃಷ್ಟಿ ಮಾಡಿಕೊಂಡ ಪರಿಸ್ಥಿತಿಯಿದು'' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಒಗಟಿನ ರೀತಿ ಮಾತನಾಡಿದರು.
ಮೈಸೂರಿನಲ್ಲಿ ಇದೇ ತಿಂಗಳ 26 ರಂದು ನಡೆಯಲಿರುವ ಪಂಚರತ್ನ ಸಮಾರೋಪ ಸಮಾರಂಭದ ವೇದಿಕೆಯ ನಿರ್ಮಾಣ ಕಾರ್ಯ ವೀಕ್ಷಿಸಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪಂಚರತ್ನ ಸಮಾರೋಪ ಕಾರ್ಯಕ್ರಮ ನಡೆಯುತ್ತಿದೆ. ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ವೇದಿಕೆ ಸಿದ್ದವಾಗುತ್ತಿದೆ. 10 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 2023 ವಿಧಾನಸಭಾ ಚುನಾವಣೆಗೆ ಅಧಿಕೃತವಾಗಿ ಪ್ರಚಾರ ಪ್ರಾರಂಭವಾಗಲಿದೆ ಎಂದರು.
ಶ್ರೀಗಳಿಗೆ ಅಭಿನಂದನೆ: ''ಉರಿಗೌಡ, ನಂಜೆಗೌಡ ಪ್ರಕರಣದ ಬಗ್ಗೆ ಅನಗತ್ಯ ಚರ್ಚೆ ಮಾಡುತ್ತಿದ್ದ ವ್ಯಕ್ತಿಗಳನ್ನು ಹಾಗೂ ಸಿನಿಮಾ ಮಾಡಲು ಹೊರಟ ವ್ಯಕ್ತಿಗಳನ್ನು ಆದಿ ಚುಂಚನಗಿರಿ ಶ್ರೀಗಳು ಕರೆದು ಬುದ್ದಿ ಹೇಳಿದ್ದಕ್ಕೆ ನಾನು ನಿರ್ಮಲಾನಂದ ಸ್ವಾಮೀಜಿಗಳನ್ನು ಅಭಿನಂದಿಸುತ್ತೇನೆ. ಈ ಬಗ್ಗೆ ನಾನು ಮಾತನಾಡುವುದಿಲ್ಲ'' ಎಂದು ಕುಮಾರಸ್ವಾಮಿ ಹೇಳಿದರು. ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಮುಂದೆ ಇದ್ದೇವೆ. ಕೋಲಾರ ಗೆದ್ದೇ ಗೆಲ್ಲುತ್ತೇವೆ. ಸಿದ್ದರಾಮಯ್ಯನವರು ಹೈಕಮಾಂಡ್ ಹೆಸರು ಹೇಳಿ ಹಿಂದೆ ಸರಿದಿರಬಹುದು ಎಂದು ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದ ಸಿದ್ದರಾಮಯ್ಯನವರ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಒಂದೇ ಹಂತದಲ್ಲಿ ಚುನಾವಣೆ ಮಾಡಿ: ''ಹಾಸನದ ಅಭ್ಯರ್ಥಿ ಯಾರು ಎಂಬ ಬಗ್ಗೆ ಈಗಾಗಲೇ ನಿನ್ನೆ ಸ್ಥಳೀಯ ಶಾಸಕರ ಹಾಗೂ ಸಂಸದರ ಸಭೆಯನ್ನು ದೇವೇಗೌಡರು ನಡೆಸಿದ್ದಾರೆ. ಎರಡನೇ ಪಟ್ಟಿ ಸಿದ್ದವಾಗಿದ್ದು, ಆ ಪಟ್ಟಿಯಲ್ಲಿ ಹಾಸನ ಅಭ್ಯರ್ಥಿಯ ಹೆಸರು ಇರುತ್ತದೆ. ಇದನ್ನು ನಾನು, ಹೆಚ್.ಡಿ.ದೇವೆಗೌಡರು ಹಾಗೂ ಇಬ್ರಾಹಿಂ ಒಟ್ಟಿಗೆ ಕುಳಿತು ಒಳ್ಳೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಯಾವುದೇ ಅನುಮಾನ ಬೇಡ, ಹಾಸನಕ್ಕೆ ರಾಜೇಗೌಡರ ಹೆಸರು ಸಹ ಪ್ರಸ್ತಾಪ ಆಗಿದೆ'' ಎಂದರು.
''ಮುಂಬರುವ ವಿಧಾನಸಭಾ ಚುನಾವಣೆಯನ್ನು, ಒಂದೇ ಹಂತದಲ್ಲಿ ನಡೆಸುವಂತೆ ಚುನಾವಣೆ ಆಯೋಗಕ್ಕೆ ಜೆಡಿಎಸ್ ಸಹ ಮನವಿ ಮಾಡಿದ್ದು, ರಾಜ್ಯದಲ್ಲಿ ಪಾರದರ್ಶಕ ಚುನಾವಣೆ ನಡೆಯುವುದು ಅನುಮಾನವಿದೆ. ಆದರೆ, ಕೇವಲ ಕೆಲವು ಪಕ್ಷಗಳಿಗೆ ಮಾತ್ರ ಪಾರದರ್ಶಕ ಚುನಾವಣೆ ನಡೆಸಲು ಹೇಳುತ್ತಾರೆ'' ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಚನ್ನಪಟ್ಟಣದಲ್ಲಿ ಮಾತ್ರ ನನ್ನ ಸ್ಪರ್ಧೆ: ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ''ನಾನು ಎರಡು ಕಡೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ, ನಾನು ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂಬುದು ಸುಳ್ಳು. ನಾನು ಚನ್ನಪಟ್ಟಣ ಬಿಟ್ಟು ಬೇರೆ ಎಲ್ಲೂ ಸ್ಪರ್ಧೆ ಮಾಡುವುದಿಲ್ಲ. ಈಗಾಗಲೇ ಚನ್ನಪಟ್ಟಣದಲ್ಲಿ ಚುನಾವಣೆ ಮುಗಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಕನಕಪುರದಲ್ಲಿ ಮುಂದಿನ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಿ ಕನಕಪುರವನ್ನ ಸಹ ಗೆಲ್ಲುತ್ತೇವೆ'' ಎಂದರು.
26ರಂದು ಹೆಚ್.ಡಿ.ದೇವೇಗೌಡರು ಬೆಂಗಳೂರಿನಿಂದ ಮೈಸೂರಿಗೆ ರೋಡ್ ಶೋ ಮಾಡುವ ಬಗ್ಗೆ ಪ್ಲಾನ್ ಮಾಡಲಾಗಿತ್ತು. ಆದರೆ, ವೈದ್ಯರ ಸಲಹೆ ಹಿನ್ನೆಲೆಯಲ್ಲಿ ರೋಡ್ ಶೋ ರದ್ದು ಮಾಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ರೋಡ್ ಶೋ ನಡೆಸುತ್ತೇವೆ ಎಂದರು.
ರಮ್ಯಾ ಸ್ಪರ್ಧೆಗೆ ಸ್ವಾಗತ: ''ರಾಜ್ಯ ರಾಜಕಾರಣಕ್ಕೆ ಪುನಃ ಚಿತ್ರನಟಿ ರಮ್ಯಾ ಸ್ಪರ್ಧೆಗೆ ಮಾಡುತ್ತಿರುವುದಕ್ಕೆ ಸ್ವಾಗತ. ಅವರು ಚನ್ನಪಟ್ಟಣ ಹಾಗೂ ಇತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಚಿತ್ರ ನಟ, ನಟಿಯರಿಗೆ ಸಹಜವಾಗಿಯೇ ಜನಪ್ರಿಯತೆ ಇರುತ್ತದೆ. ಅವರು ಮೂರಲ್ಲ ಮೂವತ್ತು ಕ್ಷೇತ್ರದಲ್ಲೂ ಸ್ಪರ್ಧೆ ಮಾಡಬಹುದು'' ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಗ್ಯಾರಂಟಿ ಕಾರ್ಡ್ ಅಲ್ಲ ಡುಪ್ಲಿಕೆಟ್ ಕಾರ್ಡ್: ಕಾಂಗ್ರೆಸ್ ತನ್ನ ನಾಲ್ಕನೇ ಗ್ಯಾರಂಟಿ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇದು ಗ್ಯಾರಂಟಿ ಕಾರ್ಡ್ ಅಲ್ಲ, ಡುಪ್ಲಿಕೆಟ್ ಕಾರ್ಡ್. ಅವರು ಈ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತಾರೆ ಎಂಬುದನ್ನು ಹೇಳುವುದಿಲ್ಲ. ಬರೀ ಗ್ಯಾರಂಟಿ ಕಾರ್ಡ್ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಚುನಾವಣೆ ನಂತರ ಹಲವಾರು ಜನ ಸೋತು ನಿವೃತ್ತಿ ಪಡೆಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ನನಗೆ ಗೋವಿಂದರಾಜನಗರ ಇದೆ, ಮತ್ತೊಂದು ಕ್ಷೇತ್ರದ ಅಗತ್ಯ ಇಲ್ಲ: ವಿ.ಸೋಮಣ್ಣ