ಮೈಸೂರು: ಪತ್ನಿಯ ಮೇಲೆ ಸಂಶಯಗೊಂಡು ಕುಡಿದ ಮತ್ತಿನಲ್ಲಿ ದೊಣ್ಣೆಯಿಂದ ಹೊಡೆದು ಆಕೆಯನ್ನು ಕೊಲೆ ಮಾಡಿರುವ ಘಟನೆ ಸರಗೂರು ತಾಲ್ಲೂಕಿನ ನೆಮ್ಮನಹಳ್ಳಿ ಹಾಡಿಯಲ್ಲಿ ನಡೆದಿದೆ.
ನೆಮ್ಮನಹಳ್ಳಿ ಹಾಡಿಯ ಕಾಳಮ್ಮ (33) ಕೊಲೆಯಾದ ಮೃತ ದುದೈವಿ. ಕಾಳಮ್ಮಳ ಗಂಡ ಕಾಳಸ್ವಾಮಿ ಪ್ರತಿನಿತ್ಯ ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ, ಅಲ್ಲದೇ, ಹೆಂಡತಿಗೆ ಹೊಡೆಯುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಮುಂಜಾನೆ ಹೆಂಡತಿಯೊಡನೆ ಕುಡಿದ ಮತ್ತಿನಲ್ಲಿ ಜಗಳ ತೆಗೆದು ಹೊಡಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೇ ತನ್ನ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ಗ್ರಾಮದಲ್ಲಿ ಹೇಳಿಕೊಂಡು ಓಡಾಡಿದ್ದು, ವಿಚಾರದ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದಾಗ ಕಾಳಮ್ಮ ಕೊಲೆಯಾಗಿರುವ ವಿಚಾರ ತಿಳಿದಿದೆ. ಬಳಿಕ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಕಾಳಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಸರಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.