ಮೈಸೂರು: ಪತ್ನಿ ಬೇರೆಯವರೊಂದಿಗೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಾಳೆ ಎಂದು ಅನುಮಾನಗೊಂಡ ಪತಿ, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಪ್ರಕಾಶ್ (37) ಎಂಬಾತನೇ ತನ್ನ ಹೆಂಡತಿ ಮೇಲೆ ಹಲ್ಲೆಗೈದು ಬಂಧಿತನಾದ ಆರೋಪಿ.
ಪತ್ನಿಯು ಬೇರೆಯವರೊಂದಿಗೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದಾಳೆ ಎಂದು ಪತಿ ಖ್ಯಾತೆ ತೆಗೆದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ, ಪತಿ ಪ್ರಕಾಶ್ ಮಚ್ಚಿನಿಂದ ಹೆಂಡತಿಯ ಕೈ ಮತ್ತು ಕುತ್ತಿಗೆ, ತಲೆಗೆ ಬಲವಾಗಿ ಹೊಡೆದಿದ್ದು, ಆಕೆ ಗಂಭೀರ ಗಾಯಗೊಂಡು ಬಿದ್ದಿದ್ದಳು.
ವಿಷಯ ತಿಳಿದು ಸ್ಥಳಕ್ಕೆ ಹುಲ್ಲಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಗಾಯಗೊಂಡು ನರಳಾಡುತ್ತ ಬಿದ್ದಿದ್ದ ಮಹಿಳೆಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಹಿಳೆಯ ತಂದೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ಪೊಲೀಸರು, ಹಲ್ಲೆ ನಡೆಸಿದ ಆರೋಪಿ ಪ್ರಕಾಶ್ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣಗಳು ಪತ್ನಿಕೊಂದ ಪತಿರಾಯ: ವಿವಾಹೇತರ ಸಂಬಂಧದ ಶಂಕೆ ಹಿನ್ನೆಲೆ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಘಟನೆ ಕಳೆದ ಎರಡು ದಿನಗಳ ಹಿಂದೆ ಮೈಸೂರಿನ ಮೆಟಗಳ್ಳಿ ಬಳಿ ನಡೆದಿತ್ತು. ಕೊಲೆ ಮಾಡಿದ ಬಳಿಕ ಪತಿ ತಾನಾಗೆ ಬಂದು ಮೇಟಗಳ್ಳಿ ಪೊಲೀಸರಿಗೆ ಶರಣಾನಾಗಿದ್ದಾನೆ. ಕೊಲೆಯಾದವರನ್ನು ಕಾವೇರಿ ಗಡಾಯಿ (40) ಎಂದು ಗುರುತಿಸಲಾಗಿದೆ.
ಕಳೆದ ಆರು ತಿಂಗಳ ಹಿಂದೆ ಹರಿಯಾಣದಿಂದ ಪ್ರಮೋದ್ ಕುಮಾರ್ ದಂಪತಿ ಮೇಟಗಳ್ಳಿಗೆ ಬಂದು ನೆಲೆಸಿದ್ದರು. ಖಾಸಗಿ ಕಾರ್ಖಾನೆಯಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಪ್ರಮೋದ್ ಕುಮಾರ್ ಜನಾ (43) ತನ್ನ ಪತ್ನಿ ಒಡಿಶಾ ಮೂಲದ ಕಾವೇರಿ ಗಡಾಯಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸುತ್ತಿದ್ದ. ಆಗಾಗ್ಗೆ ಈ ವಿಚಾರವಾಗಿ ಆಕೆಯೊಂದಿಗೆ ಜಗಳ ಸಹ ಮಾಡುತ್ತಿದ್ದ. ಘಟನೆ ದಿನ ಇದೇ ವಿಚಾರಕ್ಕೆ ಜಗಳ ನಡೆದು ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಾಯಚೂರು: ಪತ್ನಿ ಕೊಲೆಗೈದು ಆತ್ಮಹತ್ಯೆ ಕಥೆ ಕಟ್ಟಿದ ಪತಿ ಬಂಧನ