ಮೈಸೂರು: ಸುಡು ಬೇಸಿಗೆಯಲ್ಲಿಯೂ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳು ಕೂಲ್ ಆಗಿ, ಲವಲವಿಕೆಯಿಂದ ಪ್ರವಾಸಿಗರಿಗೆ ಮುದು ನೀಡುತ್ತಿವೆ.
ಹೌದು, ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳ ಹಿತದೃಷ್ಟಿಯಿಂದ ಅವುಗಳು ಇರುವ ಸ್ಥಳಗಳನ್ನು ತಂಪಾಗಿಸುವ ಮೂಲಕ ಪ್ರಾಣಿಗಳನ್ನು ಕೂಲ್ ಆಗಿ ಇಡುವ ಕಾರ್ಯವನ್ನು ಮೃಗಾಲಯ ಸಿಬ್ಬಂದಿ ಮಾಡುತ್ತಿದ್ದಾರೆ.
ಮೃಗಾಲಯದಲ್ಲಿ ಇರುವ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆ ಬಿಸಿಲಿನಿಂದ ರಕ್ಷಣೆ ನೀಡಲು ಪ್ರಾಣಿಗಳಿಗೆ ವಿಶೇಷವಾಗಿ ನೀರು ಸಿಂಪಡಣೆ, ವಿಶೇಷ ಆಹಾರ, ಐಸ್ ಕ್ರೀಮ್ ಮಿಶ್ರಿತ ಹಣ್ಣು ಮತ್ತು ತರಕಾರಿ ಹಾಗೂ ಚಿಂಪಾಂಜಿಗಳಿಗೆ ಎಳನೀರಿನ ವ್ಯವಸ್ಥೆ ಮಾಡಲಾಗಿದೆ.
ಬಿಸಿಲಿನಿಂದ ಮೃಗಾಲಯದ ಪ್ರಾಣಿಗಳ ರಕ್ಷಣೆಗೆ ಕೆಲವು ನೂತನ ವಿಧಾನಗಳನ್ನು ಅನುಸರಿಸಲಾಗುತ್ತಿದೆ ಎಂದು ಮೃಗಾಲಯದ ನಿರ್ದೇಶಕ ಅಜೀತ್ ಕುಲಕರ್ಣಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.