ಮೈಸೂರು: ಜಿಲ್ಲಾ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ‘ಸ್ವೀಟಿ’ ಎಂಬ ಹೆಣ್ಣು ಶ್ವಾನ ಅನಾರೋಗ್ಯದಿಂದ ಮೃತಪಟ್ಟಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಇಂದು ಅಂತ್ಯಕ್ರಿಯೆ ನಡೆಸಲಾಯಿತು.
![Honest police dog](https://etvbharatimages.akamaized.net/etvbharat/prod-images/kn-mys-04-policedog-vis-ka10003_17092019174534_1709f_1568722534_894.jpg)
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮತ್ತು ಸಿಬ್ಬಂದಿ ಗೌರವ ರಕ್ಷೆ ನೀಡಿ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡರು.
ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಮೂರು ವರ್ಷ ನಿರಂತರವಾಗಿ ಚಿನ್ನದ ಪದಕ ಗಳಿಸಿದ್ದ 5 ವರ್ಷದ ಸ್ವೀಟಿ, ಮೂರು ತಿಂಗಳಿನಿಂದ ಜ್ವರದಿಂದ ಬಳಲುತ್ತಿತ್ತು. ಇದು ಸೋಮವಾರ ಸಂಜೆ ಮೃತಪಟ್ಟಿತ್ತು. ಲಲಿತ ಮಹಲ್ ರಸ್ತೆಯಲ್ಲಿರುವ ಶ್ವಾನದಳದ ಕಚೇರಿ ಆವರಣದ ಮೈದಾನದಲ್ಲಿ ಇಂದು ಅಂತ್ಯಕ್ರಿಯೆ ನೆರವೇರಿಸಲಾಯಿತು.
2014ರ ಮೇ 22ರಂದು ಪೊಲೀಸ್ ಇಲಾಖೆ ತಂದಿದ್ದ ಸ್ವೀಟಿ ಅಪರಾಧ ಪತ್ತೆ ಕಾರ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದ 2016-2018ರ ಸಾಲಿನಲ್ಲಿ ಸತತವಾಗಿ ವಲಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿತ್ತು. ಜಿಲ್ಲಾ ಪೊಲೀಸ್ ಶ್ವಾನ ದಳದಲ್ಲಿ ಒಟ್ಟು 6 ಶ್ವಾನಗಳಿದ್ದು, ಅದರಲ್ಲಿ ಸ್ಫೋಟಕ ವಸ್ತು ಪತ್ತೆ ವಿಭಾಗದಲ್ಲಿ 3, ಅಪರಾಧ ಪತ್ತೆ ವಿಭಾಗದಲ್ಲಿ 2 ಶ್ವಾನಗಳಿವೆ. ಸ್ವೀಟಿ ನಿಧನದಿಂದ ಶ್ವಾನಗಳ ಸಂಖ್ಯೆ 5ಕ್ಕೆ ಇಳಿದಿದೆ.