ಮೈಸೂರು : ಅತಿ ಹೆಚ್ಚು ಹಿಂದಿ ಹಾಗೂ ಇತರ ಭಾಷೆ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದ ನಗರದ ಒಲಂಪಿಯಾ ಚಿತ್ರಮಂದಿರ ಪ್ರೇಕ್ಷಕರ ಕೊರತೆಯಿಂದ ಇತಿಹಾಸದ ಪುಟ ಸೇರಿದೆ. 1929ರಲ್ಲಿ ಟೂರಿಂಗ್ ಟಾಕೀಸ್ ಆಗಿ ಊರೂರಿನಲ್ಲಿ ಸುತ್ತಿ ಟೆಂಟ್ ಹಾಕಿ ಜನರಿಗೆ ಚಿತ್ರವನ್ನ ತೋರಿಸುತ್ತಿದ್ದ ಒಲಂಪಿಯಾ 1949ರಲ್ಲಿ ಶಾಶ್ವತ ಚಿತ್ರಮಂದಿರವಾಗಿ ನಿಗದಿತ ಸ್ಥಳದಲ್ಲಿ ಸ್ಥಾಪನೆಯಾಗಿತ್ತು.
ಇದನ್ನೂ ಓದಿ: ಕೆಜಿ ರಸ್ತೆಯಲ್ಲಿ ಆಟ ನಿಲ್ಲಿಸಿದ 'ಮೇನಕ' ಚಿತ್ರಮಂದಿರ : ಸ್ಟಾರ್ ನಟರ ಲಕ್ಕಿ ಥಿಯೇಟರ್ ಶಾಶ್ವತ ಬಂದ್
ಅಂದು ಸ್ಥಾಪನೆಯಾಗಿದ್ದ ಒಲಂಪಿಯಾ ಚಿತ್ರಮಂದಿರವನ್ನ ವರ್ಧಮಾನ್ ಕುಟುಂಬಸ್ಥರು ಈವರೆಗೂ ಮುಂದುವರಿಸಿಕೊಂಡು ಬಂದಿದ್ದರು. ವರ್ಧಮಾನಯ್ಯನವರ ಮೊಮ್ಮಗ ಎಂ.ವಿ ಅಜಿತ್ ಚಿತ್ರ ಮಂದಿರ ನಡೆಸಿಕೊಂಡು ಬರುತ್ತಿದ್ದರು. ಆದರೆ, ಇದೀಗ ಪ್ರೇಕ್ಷಕರ ಕೊರತೆಯಿಂದಾಗಿ ಚಿತ್ರಮಂದಿರವನ್ನ ನೆಲಸಮ ಮಾಡಲು ನಿರ್ಧಾರ ಕೈಗೊಂಡು ಈಗಾಗಲೇ ಪ್ರಕ್ರಿಯೆ ಕೂಡ ಆರಂಭಿಸಿದ್ದಾರೆ.
![Historic olympia theatre will close due to shortage of audience](https://etvbharatimages.akamaized.net/etvbharat/prod-images/kn-mys-04-20-05-2022-filmtalkiesclosingnews-7208092_20052022140445_2005f_1653035685_389.jpg)
ಅತಿ ಹೆಚ್ಚು ಅನ್ಯ ಭಾಷೆಗಳ ಚಿತ್ರ ಪ್ರದರ್ಶನಕ್ಕೆ ಖ್ಯಾತಿ : ಒಲಂಪಿಯಾ ಚಿತ್ರಮಂದಿರ ಒಟ್ಟು 582 ಆಸನಗಳ ಸಾಮರ್ಥ್ಯ ಹೊಂದಿತ್ತು. ಈ ಚಿತ್ರಮಂದಿರ ಅತಿ ಹೆಚ್ಚು ಅನ್ಯ ಭಾಷಾ ಚಿತ್ರಗಳ ಪ್ರದರ್ಶನಕ್ಕೆ ಹೆಸರುವಾಸಿಗಿತ್ತು. ಕಳೆದ 15- 20 ವರ್ಷಗಳಿಂದ ಕನ್ನಡ ಚಿತ್ರಗಳನ್ನ ಪ್ರದರ್ಶಿಸುವ ಪರಂಪರೆ ಬೆಳೆಸಿಕೊಂಡು ಬಂದಿತ್ತು.
ಕನ್ನಡ ಸಿನಿಮಾಗಳ ಪೈಕಿ ದುನಿಯಾ, ಅವಳ ಅಂತರಂಗ ಹೆಚ್ಚು ವಾರಗಳ ಕಾಲ ಪ್ರದರ್ಶನ ಕಂಡಿದ್ದವು. ಹಿಂದಿಯಲ್ಲಿ ದೇವಾನಂದ್ ಹಾಗೂ ದಿಲೀಪ್ ಕುಮಾರ್ ಚಿತ್ರಗಳು ಒಲಂಪಿಯಾದಲ್ಲಿ ಅತಿ ಹೆಚ್ಚು ಪ್ರದರ್ಶನ ಕಾಣುತ್ತಿದ್ದವು. ಇದನ್ನ ಗಮನಿಸಿದ ಇಬ್ಬರೂ ನಟರೂ ಕೂಡ ಚಿತ್ರಮಂದಿರಕ್ಕೆ ಆಗಮಿಸಿದ್ದರು.
![Historic olympia theatre will close due to shortage of audience](https://etvbharatimages.akamaized.net/etvbharat/prod-images/kn-mys-04-20-05-2022-filmtalkiesclosingnews-7208092_20052022140445_2005f_1653035685_427.jpg)
ಕೊರೊನಾ ನಂತರ ಮುಚ್ಚುತ್ತಿರುವ ಚಿತ್ರಮಂದಿರಗಳು : ಮೈಸೂರಿನಲ್ಲಿ ಒಟ್ಟು 26 ಚಿತ್ರ ಮಂದಿರಗಳಿದ್ದವು. ಅದರಲ್ಲಿ ಈಗ 9 ಚಿತ್ರಮಂದಿರಗಳು ಮಾತ್ರ ಉಳಿದಿವೆ. ಕೊರೊನಾ ಹೊಡೆತಕ್ಕೆ ಸಿಲುಕಿ ಚಿತ್ರಮಂದಿರದ ಮಾಲೀಕರು ವಿಧಿ ಇಲ್ಲದೇ ಅನೇಕ ಚಿತ್ರಮಂದಿರಗಳನ್ನ ಮುಚ್ಚಿದ್ದಾರೆ. ಶಾಂತಲಾ, ಲಕ್ಷ್ಮಿ, ಸರಸ್ವತಿ, ಪ್ರಭಾ ಚಿತ್ರ ಮಂದಿರಗಳು ಕೊರೊನಾ ಕರಿ ನೆರಳಿಗೆ ಸಿಲುಕಿ ತನ್ನ ಆಟವನ್ನ ಶಾಶ್ವತವಾಗಿ ನಿಲ್ಲಿಸಿಬಿಟ್ಟವು. ಇದೀಗ ಈ ಸಾಲಿಗೆ ಒಲಂಪಿಯಾ ಚಿತ್ರಮಂದಿರ ಸೇರಿದೆ.
ಇದನ್ನೂ ಓದಿ: ಕೋವಿಡ್ ಎಫೆಕ್ಟ್ : ಮೈಸೂರಿನಲ್ಲಿ ಪ್ರದರ್ಶನ ನಿಲ್ಲಿಸಿದ 'ಲಕ್ಷ್ಮಿ' ಚಿತ್ರಮಂದಿರ
1970ರಲ್ಲಿ ಕಾವೇರಿ ಪಾಟ್ನಾಂ, ಕೃಷ್ಣಾ ಟಾಕೀಸ್, ಒಪೇರಾ, ರಂಜಿತ್ ಶ್ರೀ ನಾಗರಾಜ್ ಚಿತ್ರಮಂದಿರಗಳು ನೆಲಸಮ ಆಗಿದ್ದವು. 1989ರಿಂದ 1996 ರೊಳಗೆ ರತ್ನ, ವಿದ್ಯಾರಣ್ಯ, ಶ್ರೀನಂದ, ಶಾಲಿಮಾರ್, ಗೋಕುಲ್ ಚಿತ್ರಮಂದಿರಗಳು ಮುಚ್ಚಿದ್ದವು. ಒಟಿಟಿ ಮಾರುಕಟ್ಟೆ ಸಹ ಚಿತ್ರಮಂದಿರ ಮುಚ್ಚಲು ಒಂದು ಕಾರಣ.