ಮೈಸೂರು: ಟಿ. ನರಸೀಪುರ ಪಟ್ಟಣ ಪೋಲಿಸ್ ಠಾಣೆಯಲ್ಲಿ ಬುಲೆಟ್ ಕಳವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಪ್ರಕರಣ ಸಂಬಂಧ ರೈಟರ್ ಕೃಷ್ಣೇಗೌಡರನ್ನು ಅಮಾನತು ಮಾಡಲಾಗಿದೆ.
ಜಿಲ್ಲೆಯ ಟಿ.ನರಸೀಪುರ ಠಾಣೆಯಲ್ಲಿ 303 ರೈಫಲ್ನ 50 ಬುಲೆಟ್ಗಳು ಕಳುವಾಗಿದ್ದ ಹಿನ್ನಲೆ ಠಾಣೆಯ ಹೆಡ್ ಕಾನ್ಸ್ಟೇಬಲ್ ಕೃಷ್ಣೇಗೌಡರನ್ನು ಅಮಾನತು ಮಾಡಿ, ಅಡಿಷನಲ್ ಎಸ್ಪಿ ನೇತೃತ್ವದ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಆದೇಶಿಸಿದ್ದರು. ಇದರಿಂದ ವಿಚಲಿತನಾದ ಕೃಷ್ಣೇಗೌಡ ಆತ್ಮಹತ್ಯೆ ಡ್ರಾಮಾ ಮಾಡಲು ಹೋಗಿ ಸಿಕ್ಕಿಬಿದ್ದಾನೆ.
ಆತ್ಮಹತ್ಯೆ ನಾಟಕ...
ಅಮಾನತು ಆದೇಶದಿಂದ ವಿಚಲಿತನಾದ ಕೃಷ್ಣೇಗೌಡ ತನ್ನ ದ್ವಿ-ಚಕ್ರವಾಹನದಲ್ಲಿ ತಾಲೂಕಿನ ಮನ್ನೇಹುಂಡಿ ಗ್ರಾಮದ ನದಿ ದಂಡೆಗೆ ತೆರಳಿ ತನ್ನ ಬಟ್ಟೆ ಕಳಚಿ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶ ಸೃಷ್ಟಿಸಿ, ಪರಾರಿಯಾದ ಆತ ಹುಣಸೂರಿನ ಹುಲ್ಲಿನ ಮೆದೆಯಲ್ಲಿ ಅವಿತು ಕುಳಿತಿದ್ದಾನೆ. ಬಳಿಕ ತನ್ನ ಸಂಬಂಧಿಕರಿಗೆ ಕಾರು ತರುವಂತೆ ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಗ್ರಾಮದಲ್ಲಿ ಕೃಷ್ಣೇಗೌಡನ ವರ್ತನೆಯನ್ನು ಗಮನಿಸಿದ ಗ್ರಾಮಸ್ಥರು ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಡಿವೈಎಸ್ಪಿ ಪ್ರಭಾಕರ್ ಸಿಂಧೆ ಹಾಗು ಸಿಪಿಐ ಎಂ.ಆರ್.ಲವ್ ನೇತೃತ್ವದ ತಂಡ ಹುಲ್ಲಿನ ಮೆದೆಯಲ್ಲಿ ಅವಿತು ಕುಳಿತಿದ್ದ ಕೃಷ್ಣೇಗೌಡನನ್ನು ವಶಕ್ಕೆ ಪಡೆದಿದ್ದಾರೆ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ಮೈಸೂರಿನ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿಗಳ ಕಚೇರಿಗೆ ಕರೆತರಲಾಗಿದೆ. ಹೆಡ್ ಕಾನ್ಸ್ಟೇಬಲ್ ಹೈ ಡ್ರಾಮಕ್ಕೆ ಕಾರಣವೇನು ? ಬುಲೆಟ್ ನಾಪತ್ತೆ ಪ್ರಕರಣಕ್ಕೂ ಈತನಿಗೂ ಏನು ಸಂಬಂಧ ಎಂಬ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಿಷ್ಯಂತ್ ತಮ್ಮ ಕಚೇರಿಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.