ಮೈಸೂರು: ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಈ ಸಂದರ್ಭದಲ್ಲಿ ನಡೆಸುವುದು ಸರಿಯಲ್ಲ, ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸರ್ಕಾರವನ್ನ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಕೋವಿಡ್ ಸಂದರ್ಭದಲ್ಲಿ SSLC ಪರೀಕ್ಷೆ ಏಕೆ ಬೇಕು.? ಎಂದು ಪ್ರಶ್ನಿಸಿದ್ದಾರೆ. ಮಕ್ಕಳ ಜೀವನ ಜೀವ ಎರಡೂ ಮುಖ್ಯ. ಹಾಗಾಗಿ ಕೂಡಲೇ ಸರ್ಕಾರ SSLC ಪರೀಕ್ಷೆಯನ್ನು ರದ್ದು ಮಾಡಬೇಕು ಎಂದರು.
ಮಕ್ಕಳ ಜೀವದ ಜೊತೆ ಆಟವಾಡಬಾರದು, ಪರೀಕ್ಷೆ ನಡೆಸದಿದ್ದರೆ ಏನು ಆಗುವುದಿಲ್ಲ. ಕೇಂದ್ರ ಸರ್ಕಾರವೇ PUC ಪರೀಕ್ಷೆಯನ್ನು ರದ್ದು ಮಾಡಿದೆ. ಯಾವುದೇ ಹಠಕ್ಕೆ ಬೀಳದೆ ಪರೀಕ್ಷೆ ರದ್ದು ಮಾಡಿ. ಈಗಾಗಲೇ ಕೋವಿಡ್ 3ನೇ ಅಲೆ ಹಾಗೂ ಡೆಲ್ಟಾ ಪ್ಲಸ್ ವ್ಯಾಪಕವಾಗಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಪಾಠಗಳು ನಡೆದಿಲ್ಲ. ಆದ್ದರಿಂದ ಪರೀಕ್ಷೆ ಹಿಂಪಡೆಯರಿ ಎಂದು ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವಿಶ್ವನಾಥ್ ಮನವಿ ಮಾಡಿದರು.
ಮೈಸೂರಲ್ಲಿರುವ ದೇಶದ ಮೊದಲ ಬಾಲಕಿಯರ ಶಾಲೆಯನ್ನು ಮುಚ್ಚಿ ವಿವೇಕಾನಂದ ಸ್ಮಾರಕ ನಿರ್ಮಾಣ ಮಾಡುವುದು ಸರಿಯಲ್ಲ. ಈ ಶಾಲೆಯನ್ನು ಉಳಿಸಿ, ಸ್ಮಾರಕವನ್ನು ನಿರ್ಮಾಣ ಮಾಡಿ ಎಂದು ಅವರು ಸಲಹೆ ನೀಡಿದ್ದಾರೆ.