ಮೈಸೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕುರುಬ ಸಮುದಾಯದ ಸ್ವಾಮೀಜಿ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಮಾಜದಿಂದ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಸಿದ್ದರಾಮಯ್ಯನವರೇ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕುರುಬ ಸಮಾಜವನ್ನು ಎಸ್ಟಿ ಗೆ ಸೇರಿಸುವ ವಿಚಾರದಲ್ಲಿ ಸಮುದಾಯದ ಸ್ವಾಮೀಜಿ (ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀನಿರಂಜನಾನಂದ ಪುರಿ ಶ್ರೀಗಳು) ಪಾದಯಾತ್ರೆ ನಡೆಸುತ್ತಿದ್ದಾರೆ. ಇದಕ್ಕೆ ಆರ್.ಎಸ್.ಎಸ್ ಹಣ ನೀಡಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಕೂಡಲೇ ಸ್ವಾಮೀಜಿ ಹಾಗೂ ಸಮುದಾಯದ ಕ್ಷಮೆಯನ್ನು ಕೇಳಿ ತಮ್ಮ ಹೇಳಿಕೆಯನ್ನು ಸಿದ್ದರಾಮಯ್ಯ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಸಮಾಜದಿಂದ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ. ನೀವು ಒಬ್ಬರೇ ಬುದ್ಧಿವಂತರಲ್ಲ. ನೀವು ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಮಾಜ, ಸ್ವಾಮೀಜಿಯವರ ಪಾತ್ರವೂ ಇದೆ. ಅದನ್ನು ನೀವು ಮರೆಯಬಾರದು ಮಿಸ್ಟರ್ ಸಿದ್ದರಾಮಯ್ಯ. ನೀವು ಸಮಾಜಕ್ಕಿಂತ ಬಹಳ ಚಿಕ್ಕವರು ಎಂದು ವಿಶ್ವನಾಥ್ ಗುಡುಗಿದರು.
ಈ ಸುದ್ದಿಯನ್ನೂ ಓದಿ: ನಮ್ಮ ಮಠ ಕಿಂಗ್ ಮೇಕರ್ ಆಗುತ್ತದೆಯೇ ಹೊರತು ಕಿಂಗ್ ಆಗಲ್ಲ: ಕಾಗಿನೆಲೆ ನಿರಂಜನಾನಂದಪುರಿ ಶ್ರೀ
ಜೆಡಿಎಸ್ನಲ್ಲಿ ಕಡೆಗಣನೆಗೆ ಒಳಗಾಗಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಕಾಂಗ್ರೆಸ್ಗೆ ಹೋಗಿ ಏಟು ತಿನ್ನುವ ಬದಲು ಬಿಜೆಪಿಗೆ ಬಂದರೆ ಒಳ್ಳೆಯದು. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ. ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಪಾತ್ರ ಇಲ್ಲ. ಅದು ಸಿಎಂ ಪರಮಾಧಿಕಾರ, ಆದ್ರೆ ಯಡಿಯೂರಪ್ಪ ಸುಮ್ಮನೆ ಹೈಕಮಾಂಡ್ ಕಡೆ ಬೆರಳು ತೋರಿಸುತ್ತಾರೆ. ಅವರಿಗೆ ರಾಜ್ಯದ ವಿಚಾರ ಏನು ಗೊತ್ತಿಲ್ಲ ಎಂದು ಎಂಎಲ್ಸಿ ವಿಶ್ವನಾಥ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: ದಾವಣಗೆರೆ ತಲುಪಿದ ಕುರುಬ ಸಮುದಾಯದ ಪಾದಯಾತ್ರೆ
ನೂತನ ಮಂತ್ರಿಯಾಗಿರುವ ಯೋಗೇಶ್ವರ್ ಮೈಸೂರು ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಹೇಳಿಕೆಗೆ ಉಗ್ರವಾಗಿ ಪ್ರತಿಕ್ರಿಯಿಸಿದ್ದು, ಯೋಗೇಶ್ವರ್ ಮೈಸೂರಿಗೆ ಏಕೆ? ರಾಜ್ಯಕ್ಕೆ ಉಸ್ತುವಾರಿ ಆಗಲಿ. ಮೈಸೂರಿಗೆ ಬಂದು ಇಲ್ಲೊಂದು ಮೆಗಾ ಸಿಟಿ ಹಗರಣ ಮಾಡಲಿ, ಮೈಸೂರಿನ ಜನಕ್ಕೂ ಟೋಪಿ ಹಾಕಲಿ ಎಂದು ಸಿ.ಪಿ. ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.