ಮೈಸೂರು: ಕೊರೊನಾ ಬಗ್ಗೆ ರಾಜ್ಯದ ಜನತೆ ಆತಂಕ ಪಡಬೇಕಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದ ಜಲದರ್ಶಿನಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಹೆಚ್ಚಾಗಿ ಕಾಣಿಸುತ್ತಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಹೆಚ್ಚಾಗದಂತೆ ತಡೆಗೆ ಆರೋಗ್ಯ ಇಲಾಖೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಹ ತಪಾಸಣೆ ಹೆಚ್ಚಿಸಲಾಗಿದೆ. ನಿತ್ಯ 5,000ಕ್ಕೂ ಹೆಚ್ಚು ಜನರಿಗೆ ತಪಾಸಣೆ ಮಾಡುವ ಗುರಿ ನೀಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಕಾಣಿಸಿಕೊಂಡಿರುವ ವೈರಸ್ ಆತಂಕಕಾರಿ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಹಾಗಾಗಿ ಜನತೆ ಈ ವೈರಸ್ ಬಗ್ಗೆ ಆತಂಕ ಪಡುವ ಪ್ರಮೇಯ ಇಲ್ಲ. ಈಗಾಗಲೇ ರಾಜ್ಯ ಸರ್ಕಾರ 60 ವರ್ಷ ಮೇಲ್ಪಟ್ಟ ಹಿರಿಕರಿಗೆ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸಿದರೆ ಕೊರೊನಾ ಬಾರದಂತೆ ತಡೆಯಲು ಸಾಧ್ಯ ಎಂದು ತಿಳಿಸಿದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಗೆ ಆರೋಗ್ಯ ಇಲಾಖೆಯಿಂದ ಯಾವುದೇ ನಿಬಂಧನೆಗಳನ್ನು ವಿಧಿಸಿಲ್ಲ. ದೇಶದ ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊರೊನಾ ಹರಡುವಿಕೆ ಕಡಿಮೆ ಇದೆ ಹಾಗೂ ಇತರ ರಾಜ್ಯಗಳಿಗಿಂತ ರಾಜ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ಕೇರಳದಲ್ಲಿ ಕೋವಿಡ್ ಜೆಎನ್ 1 ಹೆಚ್ಚಳ:ಕೊಡಗು ಗಡಿಭಾಗದಲ್ಲಿ ಹೈ ಅಲರ್ಟ್: ಕೇರಳದಲ್ಲಿ ಕೋವಿಡ್ ಜೆಎನ್ 1 ರೂಪಾಂತರಿ ಪ್ರಕರಣ ವರದಿ ಹೆಚ್ಚಾದ ಹಿನ್ನೆಲೆ ಕೊಡಗು ಜಿಲ್ಲೆ ಗಡಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 4 ಚೆಕ್ ಪೋಸ್ಟ್ ಗಳ ಆರಂಭಿಸಲಾಗಿದೆ. ಸದರಿ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಂದ ಸಾರ್ವಜನಿಕರ ಹಾಗೂ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಆರೋಗ್ಯಾಧಿಕಾರಿ ಡಾ ಕೆ ಎಂ ಸತೀಶ್ ಕುಮಾರ್ ತಿಳಿಸಿದ್ದಾರೆ.
1 ಜಿಲ್ಲಾ ಆಸ್ಪತ್ರೆ ಹಾಗೂ 2 ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಐಸೋಲೇಷನ್ ಹಾಸಿಗೆ, ಆಕ್ಸಿಜನ್ ಸಿಲಿಂಡರ್ ಗಳ ಫಿಲ್ಲಿಂಗ್ ಹಾಗೂ ಆಕ್ಸಿಜನ್ ಪ್ಲಾಂಟ್ ಗಳನ್ನು ಸುಸ್ಥಿತಿಯಲ್ಲಿಡಲಾಗಿದೆ. ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ಗಳನ್ನು ಕೂಡ ಸುಸ್ಥಿತಿಯಲ್ಲಿಡಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಚೆಕ್ ಪೋಸ್ಟ್ ಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಿ ಬಿಡುತ್ತಿದ್ದಾರೆ. ಆರೋಗ್ಯ ಇಲಾಖೆಯಿಂದ ಇಬ್ಬರು ಕಮ್ಯೂನಿಟಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತಪಾಸಣೆ ವೇಳೆ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಅಂಥವರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು, ಪ್ರಯಾಣಿಕರು ಎಲ್ಲಿಗೆ ತೆರಳುತ್ತಾರೋ ಆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೇರಳದಿಂದ ಬರುವ ಖಾಸಗಿ ವಾಹನಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಇಲಾಖೆ ಸೂಚನೆಯಂತೆ ತಪಾಸಣೆ ಮಾಡಲಾಗುತ್ತಿದೆ. ಕೋವಿಡ್ ಸೋಂಕಿನ ಲಕ್ಷಣ ಕಂಡುಬಂದರೆ ಅಂತವರಿಗೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಶಿವಮೊಗ್ಗ: 3 ಕೋವಿಡ್ ಕೇಸ್ ಪತ್ತೆ; ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಜನ್, 100 ಐಸಿಯು ಬೆಡ್ ವ್ಯವಸ್ಥೆ