ಮೈಸೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಇದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಂಸದ ಧ್ರುವ ನಾರಾಯಣ್ ಆರೋಪಿಸಿದ್ದಾರೆ.
ಇಂದು ಆರೋಗ್ಯ ಹಸ್ತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಂಸದ ಧ್ರುವ ನಾರಾಯಣ್, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿನ ಪ್ರಮಾಣವೂ ಸಹ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಇದನ್ನು ನಿಯಂತ್ರಣ ಮಾಡುವುದರಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮುಂಜಾಗ್ರತಾ ಕ್ರಮಗಳೇ ಇಲ್ಲ. ಕೇರಳ, ತೆಲಂಗಾಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿದ್ದು, ಕರ್ನಾಟಕದಲ್ಲಿ ಇದು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಮಂತ್ರಿಗಳ ನಡುವೆ ಸಹಕಾರ ಮನೋಭಾವ ಇಲ್ಲ. ಮುಖ್ಯಮಂತ್ರಿಗಳು ಮತ್ತು ಸಚಿವ ಸಂಪುಟದ ಸದಸ್ಯರ ನಡುವೆ ಸಹಕಾರ ಇಲ್ಲ. ಮೊದಲ ಬಾರಿ 2008ರಿಂದ 2013ರವರೆಗೆ ಆಡಳಿತ ನಡೆಸಿದ ಬಿಜೆಪಿ ಉತ್ತಮ ಆಡಳಿತ ಕೊಡಲು ವಿಫಲವಾಗಿದ್ದು, 3 ವಿಭಜನೆಯಾಗಿತ್ತು.
ಇದೀಗ 2ನೇ ಬಾರಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಕೋವಿಡ್ ನಿರ್ವಹಣೆಯಲ್ಲಿ ಎಡವಿದೆ. ಜನರ ಜೀವ ಕಾಪಾಡುವಲ್ಲಿ ವಿಫಲವಾಗಿದೆ. ಇತಂಹ ಸಂಕಷ್ಟದ ಸಂದರ್ಭದಲ್ಲೂ ಪ್ರವಾಹ ಮತ್ತು ಕೋವಿಡ್ ಕಡೆ ಗಮನ ಹರಿಸುವುದನ್ನು ಬಿಟ್ಟು ಸಚಿವ ಸಂಪುಟ ವಿಸ್ತರಣೆಯಲ್ಲಿ ತೊಡಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.