ಮೈಸೂರು: ದಸರಾ ಯಶಸ್ವಿ ರೂವಾರಿಗಳಾದ ಗಜಪಡೆಯ ಆಹಾರದಲ್ಲೂ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆನೆಗಳಿಗೆ ಕೊಡುವ ಮೇವಿನಲ್ಲೂ ಅಧಿಕಾರಿಗಳು ನುಂಗಣ್ಣರಾಗಿ ತಮ್ಮ ಹೊಟ್ಟೆ ತುಂಬಿಸುತ್ತಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ನಾಗಭೂಷಣರಾವ್ ಆರೋಪಿಸಿದ್ದಾರೆ.
ಸರ್ಕಾರದ ಜನತಾಬಜಾರ್, ಹಾಪ್ ಕಾಮ್ಸ್ ಮಳಿಗೆ ಮತ್ತು ಕೆಎಂಎಫ್ ಸಂಸ್ಥೆಗಳು ಆನೆಗಳಿಗೆ ಆಹಾರ ಕೊಡುತ್ತೇವೆಂದು ಮುಂದೆ ಬಂದರೂ, ಸರ್ಕಾರದ ಅಧೀನದಲ್ಲಿರುವ ಆಹಾರ ಒದಗಿಸುವ ಸಂಸ್ಥೆಗಳಿಗೆ ಟೆಂಡರ್ ನೀಡದೆ ನಿರ್ಲಕ್ಷ್ಯವಹಿಸಿ, ಬೇರೆ ಟೆಂಡರ್ದಾರನಿಗೆ ಟೆಂಡರ್ ನೀಡಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ನಾಗಭೂಷಣ್‌ರಾವ್.
ಇನ್ನು ಈ ಸಂಬಂಧ ಸಮರ್ಪಕ ಉತ್ತರ ನೀಡುವಂತೆ ಪತ್ರ ಬರೆದರೂ ಕೇರ್ ಮಾಡದ ಅಧಿಕಾರಿಗಳು ಕಳೆದ ವರ್ಷ ಡಿಸಿಎಫ್ ಅವರು, ಸರ್ಕಾರ ಅಧೀನದಲ್ಲಿರುವ ಸಂಸ್ಥೆಗಳಿಂದಲೇ ಆನೆಗೆ ಆಹಾರ ನೀಡುವ ಬಗ್ಗೆ ಪತ್ರ ಬರೆದಿದ್ದರು. ಹಿಂದಿನ ಡಿಸಿಎಫ್ ವರ್ಗಾವಣೆಯಾದ ಹಿನ್ನೆಲೆ ಬರೆದ ಪತ್ರಗಳೆಲ್ಲಾ ನೆನೆಗುದಿಗೆ ಬಿದ್ದಿವೆ. ಈ ಪತ್ರದ ಬಗ್ಗೆ ಯಾವುದೇ ಗಮನವನ್ನೂ ಅಧಿಕಾರಿಗಳು ಹರಿಸಿಲ್ಲ ಎಂದು ಆರೋಪಿಸಿದರು.
ಅದಲ್ಲದೆ ಅಧಿಕಾರಿಗಳ ಸಂಬಂಧಿಗಳಿಗೆ ಹೆಸರು ಬದಲಾಯಿಸಿ ಟೆಂಡರ್ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಆನೆಗಳ ಆಹಾರದಲ್ಲಿ ನಡೆಯುತ್ತಿರುವ ಅವ್ಯವಹಾರ ನಿಲ್ಲಿಸುವಂತೆ ಹಿಂದಿನ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲವೆಂದು 'ಈಟಿವಿ ಭಾರತ್'ಗೆ ಆರ್ಟಿಐ ಕಾರ್ಯಕರ್ತ ನಾಗಭೂಷಣರಾವ್(ಪ್ಯಾಲೇಸ್ ಬಾಬು) ವಿವರಣೆ ನೀಡಿದರು.