ಮೈಸೂರು: ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಿ ಎಂದು ಕೆ.ಆರ್. ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಸರ್ಕಾರಕ್ಕೆ ಮನವಿ ಮಾಡಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯದವರು ಸಾಕಷ್ಟು ಮಂದಿ ಇದ್ದಾರೆ. ಸರ್ಕಾರ ಈ ಸಮುದಾಯದ ಕಲ್ಯಾಣಕ್ಕಾಗಿ ಅಭಿವೃದ್ಧಿ ಮಂಡಳಿ ರಚನೆ ಮಾಡಿದೆ. ಆದರೆ, ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ನಿಮಿತ್ತ ಅಗತ್ಯ ಜಾತಿ ಪ್ರವಾಣ ಪತ್ರ ನೀಡಲು ಅನೇಕ ತೊಂದರೆಗಳಾಗುತ್ತಿದೆ. ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್. ಆಶೋಕ್ ಜಾತಿ ಪ್ರವಾಣ ಪತ್ರ ನೀಡಲು ಸ್ಥಳದಲ್ಲಿ ಆದೇಶ ನೀಡಿದ್ದಾರೆ ಎಂದರು.
ಸರ್ಕಾರ ರಾಜ್ಯದ ಎಲ್ಲ ತಹಶೀಲ್ದಾರ್ಗಳಿಗೆ ಆದೇಶ ನೀಡಿ ತಕ್ಷಣ ಜಾತಿ ಪ್ರಮಾಣ ಪತ್ರ ನೀಡುವಂತೆ ಮಾಡಬೇಕಿದೆ. ಇದಕ್ಕೆ ಕಾರಣರಾದ ಸಿಎಂ ಹಾಗೂ ಕಂದಾಯ ಸಚಿವರಿಗೆ ಈ ಮೂಲಕ ಅಭಿನಂದಿಸುವೆ ಎಂದು ಹೇಳಿದರು.
ಕಾರ್ಯಕರ್ತರಿಗೂ ಸೀಟು:
ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಸೀಟು ಸಿಗಲಿದೆ ಎಂಬುದಕ್ಕೆ ಪಕ್ಷ ಕಟ್ಟಿದ ಕಾರ್ಯಕರ್ತರಿಗೆ ಟಿಕೆಟ್ ನೀಡಿರುವುದು ಸಾಕ್ಷಿಯಾಗಿದೆ. ಸಾಮಾನ್ಯರಿಗೂ ನಮ್ಮ ಪಕ್ಷ ಉತ್ತಮ ಸ್ಥಾನಮಾನ ನೀಡುತ್ತದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹೈ ಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿಕ್ಕೆ ಕಾರಣರಾದವರಿಗೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಮಾತಿಲ್ಲ. ನಾನು ಪಕ್ಷದ ಶಿಸ್ತಿನ ಸಿಪಾಯಿ, ಪಕ್ಷ ನನಗೆ ಮಾತೃ ಸಮಾನವಾಗಿದೆ ಎಂದು ಹೇಳಿದರು.