ಮೈಸೂರು: ಹೊಲದಲ್ಲಿ ಬೆಳೆದಿದ್ದ 5 ಲಕ್ಷ ರೂಪಾಯಿ ಮೌಲ್ಯದ ಶುಂಠಿ ಬೆಳೆಯನ್ನು ಕಳ್ಳರು ರಾತ್ರಿ ವೇಳೆ ಕಿತ್ತು ಕದ್ದೊಯ್ದಿರುವ ಘಟನೆ ಹುಣಸೂರು ತಾಲೂಕಿನ ಸಣ್ಣೇನಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಸಣ್ಣೇನಹಳ್ಳಿ ಚಂದ್ರೇ ಗೌಡರ ಜಮೀನಿನಲ್ಲಿ ಕಳ್ಳರು ಶುಂಠಿಯನ್ನು ಕದ್ದ ಘಟನೆ ನಡೆದಿದ್ದು, ಇದೇ ತಾಲೂಕಿನ ಚೆನ್ನಸೋಗೆಯ ಪ್ರಸನ್ನ ಕುಮಾರ್, ಹೊಸಕೋಟೆಯ ಶ್ರೀನಿವಾಸ್ ಹಾಗೂ ದೇವೇಂದ್ರ ಸೇರಿದಂತೆ ಮೂವರು ಸಣ್ಣೇನಹಳ್ಳಿಯ ಚಂದ್ರೇಗೌಡ ಸೇರಿದಂತೆ ಮತ್ತಿತರ ರೈತರಿಂದ ಒಟ್ಟು 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಶುಂಠಿ ಬೆಳೆಯೂ ಉತ್ತಮವಾಗಿ ಬಂದಿತ್ತು.
ಕಳೆದ ಶನಿವಾರ ರಾತ್ರಿ ಯಾರೋ ಕಳ್ಳರು ಸುಮಾರು ಅರ್ಧ ಎಕರೆಯಷ್ಟು ಜಮೀನಿನಲ್ಲಿ, 5 ಲಕ್ಷ ರೂ ಬೆಲೆ ಬಾಳುವ ಶುಂಠಿ ಬೆಳೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮನೆ - ಅಂಗಡಿಗಳಲ್ಲಿ ಕಳ್ಳತನ ಮಾಡುವುದು, ಪಂಪ್ ಸೆಟ್, ಸ್ಲಿಂಕ್ಲರ್ ಸೆಟ್‌ಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದರು. ಆದರೆ, ಇದೀಗ ಶುಂಠಿ ಬೆಲೆ ಗಗನಕ್ಕೇರಿರುವುದರಿಂದ ಶುಂಠಿ ಬೆಳೆ ಮೇಲೂ ಕಳ್ಳರು ಕಣ್ಣು ಹಾಯಿಸಿದ್ದು, ರೈತರು ಕಷ್ಟಪಟ್ಟು ಸಾಲ ಸೋಲ ಮಾಡಿ ಬೆಳೆದ ಬೆಳೆಯೂ ಅವರಿಗೆ ದಕ್ಕದಂತಾಗಿದೆ.
ವಿಜಯಪುರದಲ್ಲಿ ರೈತನ ಮೇಲೆ ಹಲ್ಲೆ: ಟೊಮೆಟೊ ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬನಿಗೆ ಕೆನ್ನೆಗೆ ಹೊಡೆದು ಬುದ್ದಿವಾದ ಹೇಳಿದ್ದ ರೈತನ ಸಂಬಂಧಿಕರ ಮೇಲೆ ಕಳ್ಳರು ಹಲ್ಲೆ ಮಾಡಿರುವ ಘಟನೆ ವಿಜಯಪುರ ತಾಲೂಕಿನ ಅಲಿಯಾಬಾದ್ ತಾಂಡ ನಂ 2 ರಲ್ಲಿ ಭಾನುವಾರ ನಡೆದಿತ್ತು. ಅಲಿಯಾಬಾದ್ ತಾಂಡಾ 2ರ ನಿವಾಸಿ ಭೀಮು ಲಮಾಣಿ ಎಂಬವರು ತನ್ನ ಸ್ವಂತ ಜಮೀನಿನ 4 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದರು. 'ತಮ್ಮ ಜಮೀನಿನಲ್ಲಿನ ಟೊಮೆಟೊ ಕದಿಯಲು ಗ್ರಾಮದ ಯುವಕರು ರಾತ್ರಿ ಹೊಲಕ್ಕೆ ನುಗ್ಗಿದ್ದರು. ಆಗ ಬುದ್ಧಿ ಹೇಳಿದ್ದನ್ನೇ ದ್ವೇಷವಾಗಿ ಇಟ್ಟುಕೊಂಡ ಯುವಕನೊಬ್ಬ ತನ್ನ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾನೆ' ಎಂದು ಆರೋಪಿಸಿ ರೈತ ಭೀಮು ಲಮಾಣಿ ಅವರು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಹಾಸನ: ರಾತ್ರೋರಾತ್ರಿ ಜಮೀನಿನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನ