ಮೈಸೂರು: ಸರ್ಕಾರಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಶಿಕ್ಷಕರು ಸೇರಿದಂತೆ ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿ. ನರಸೀಪುರ ತಾಲೂಕಿನ ನಿಲಸೋಗೆ ಗ್ರಾಮದಲ್ಲಿ ನಡೆದಿದೆ. ನಿಲಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹದೇವಯ್ಯ, ಶಿಕ್ಷಕಿ ಮೀನಾಕ್ಷಿ, ವಿದ್ಯಾರ್ಥಿಗಳಾದ ಧನುಷ್, ಪೃಥ್ವಿ, ಗೌತಮ್ಗೆ ಗಂಭೀರ ಗಾಯವಾಗಿದೆ. ಗಾಯಾಳುಗಳಿಗೆ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ಬಿಇಒ ಶೋಭಾ ಭೇಟಿ ನೀಡಿ ಪರಿಶೀಲಿಸಿದರು. ಈ ಘಟನೆ ಬಗ್ಗೆ ನರಸೀಪುರ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್: ಪತಿ ಸಾವು, ಪತ್ನಿಗೆ ಗಾಯ
ರಾಯಚೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ಕೆಲವು ತಿಂಗಳ ಹಿಂದೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಮೂವರು ಮಹಿಳೆಯರು ಗಾಯಗೊಂಡಿರುವ ಘಟನೆ ಇಲ್ಲಿನ ನೇತಾಜಿ ನಗರ ಬಡಾವಣೆಯ ಈಶ್ವರ ದೇವಾಲಯದ ಸಮೀಪವಿರುವ ಖಾಜಾ ಬೀ ಎನ್ನುವವರ ಮನೆಯಲ್ಲಿ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಮನೆಯ ಬಾಗಿಲ ಬಳಿ ಇದ್ದ ಮಹಿಳೆ ಹೊರಗಡೆ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಖಾಜಾ ಬೀ ಎನ್ನುವವರು ಅಡುಗೆ ಅನಿಲ ಬಳಕೆ ಮಾಡಲು ಹೋದಾಗ ಏಕಾಏಕಿ ಸಿಲಿಂಡರ್ ಬ್ಲಾಸ್ಟ್ ಆಗಿತ್ತು. ಪರಿಣಾಮ ಮನೆ ಕೆಲಸ ಮಾಡಲು ಬಂದ ಮಹಿಳೆ ಸೇರಿದಂತೆ ಮೂವರು ಗಾಯಗೊಂಡಿದ್ದರು. ಸಿಲಿಂಡರ್ ಬ್ಲಾಸ್ಟ್ನಿಂದಾಗಿ ಮನೆಯ ಬಾಗಿಲು ಮುರಿದು ತುಣುಕುಗಳು ಹಾಗೂ ಮನೆಯೊಳಗೆ ಇದ್ದ ಮಹಿಳೆ ಹೊರಗಡೆ ರಸ್ತೆಯ ಮೇಲೆ ಬಂದು ಬಿದ್ದಿರುವ ಭಯಾನಕ ದೃಶ್ಯ ಬಡಾವಣೆಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕಲ್ಲು ಸಿಡಿದು ರೈತನಿಗೆ ಗಾಯ: ಕಲ್ಲು ಕ್ವಾರಿ ಬ್ಲಾಸ್ಟಿಂಗ್ ವೇಳೆ ಕಲ್ಲು ಸಿಡಿದು ರೈತನಿಗೆ ಗಾಯವಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕು ಕೆ. ಬಿ ಹೊಸಹಳ್ಳಿ ಗ್ರಾಮದಲ್ಲಿಂದು ಮುಂಜಾನೆ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಕಲ್ಲುಕ್ವಾರಿಯಲ್ಲಿ ಬ್ಲಾಸ್ಟಿಂಗ್ ಮಾಡಿದ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನಿಗೆ ಕಲ್ಲು ತಗುಲಿ ಗಾಯಗೊಂಡಿದ್ದಾನೆ.
ಇನ್ನು ಗ್ರಾಮದ ನಾಗರಾಜ್ ಎಂಬುವರಿಗೆ ಬ್ಲಾಸ್ಟ್ ಆದ ಕಲ್ಲು ತಗುಲಿ ಗಾಯಗೊಂಡಿದ್ದು, ಸದ್ಯ ಗಾಯಾಳುಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಕೆ. ಬಿ ಹೊಸಹಳ್ಳಿಯಲ್ಲಿ ಕಲ್ಲು ಕ್ವಾರಿ ಬ್ಲಾಸ್ಟ್ನಿಂದ ಸಾಕಷ್ಟು ಜನರಿಗೆ ಗಾಯಗಳಾಗಿದ್ದು, ಹಲವು ಬಾರಿ ಮನವಿ ಮಾಡಿದ್ರು ಯಾವೊಬ್ಬ ಅಧಿಕಾರಿ ಕೂಡ ಗ್ರಾಮಸ್ಥರ ಮನವಿ ಸ್ವೀಕರಿಸುತ್ತಿಲ್ಲ. ಅಲ್ಲದೇ ಪದೇ ಪದೆ ರೈತರು, ದನಕರುಗಳು ಈ ಭಾಗದಲ್ಲಿ ಕ್ವಾರಿಯಿಂದ ಮೃತಪಡುತ್ತಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೆಂಗಳೂರು ಮೂಲದ ಮುಜೀಬ್ ಹಾಗೂ ಅಬ್ದುಲ್ ರೆಹಮಾನ್ ಎಂಬುವವರ ಕ್ವಾರಿ ಇದಾಗಿದ್ದು, ಈ ಭಾಗದಲ್ಲಿ ನಡೆಯುವ ಬ್ಲಾಸ್ಟಿಂಗ್ನಿಂದಾಗಿ ಜನ ಕಂಗಾಲಾಗಿದ್ದಾರೆ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಕ್ಸಿಜನ್ ಸಿಲಿಂಡರ್ ಬ್ಲಾಸ್ಟ್: ಪತಿ ಸಾವು, ಪತ್ನಿಗೆ ಗಾಯ