ಮೈಸೂರು: ಯೋಗ ಮಾಡಲು ಸಾಂಸ್ಕೃತಿಕ ನಗರಿಗೆ ಬಂದ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ದಿ.ಪುನೀತ್ ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಕಟಿಸಿದ ಸಿಎಂ ಬೊಮ್ಮಾಯಿ ಹಾಗೂ ನಿಧನರಾದ ಪವರ್ ಸ್ಟಾರ್ ಪುನೀತ್ ಬಾಲ್ಯದ ವಿಶೇಷ ಗಣೇಶ ಮೂರ್ತಿಗಳು ಕಲಾವಿದನ ಕ್ರಿಯೇಟಿವ್ ಕಲೆಯಲ್ಲಿ ಮೂಡಿದ್ದು, ಗಣೇಶ ಹಬ್ಬಕ್ಕೆ ಮೆರುಗು ತಂದಿವೆ.
ನಗರದ ಕೆ.ಜಿ ಸ್ಟ್ರೀಟ್ ಬಡಾವಣೆಯಲ್ಲಿ ವಾಸವಿರುವ ರೇವಣ್ಣ ಎಂಬುವವರು ವಿದ್ಯಾರ್ಥಿ ಮತ್ತು ಕಲಾವಿದರಾಗಿದ್ದು, ಕಳೆದ 20 ವರ್ಷಗಳಿಂದಲೂ ಗಣೇಶ ಮೂರ್ತಿಗಳನ್ನು ಜೇಡಿಮಣ್ಣಿನಲ್ಲಿ ತಯಾರು ಮಾಡುತ್ತಿದ್ದಾರೆ. ವ್ಯಾಪಾರಕ್ಕಾಗಿ ಒಂದು ಕಡೆ ಮೂರ್ತಿಯನ್ನು ತಯಾರು ಮಾಡಿದರೆ, ಮತ್ತೊಂದು ಕಡೆ ಪ್ರತಿ ವರ್ಷವೂ ಆ ವರ್ಷದ ಪ್ರಮುಖ ಘಟನಾವಳಿಗಳ ಮೇಲೆ ಕ್ರಿಯೇಟಿವ್ ಕಲೆಗಳ ಮೂಲಕ ವಿವಿಧ ಗಣಪತಿಗಳನ್ನು ತಯಾರು ಮಾಡುತ್ತ ಬಂದಿದ್ದಾರೆ.
ಈ ಕಲಾವಿದ ಈ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 20 ರಂದು ಮೈಸೂರಿಗೆ ಯೋಗ ದಿನದಲ್ಲಿ ಭಾಗವಹಿಸಲು ಆಗಮಿಸಿದ್ದು, ಆ ಘಟನೆಯನ್ನು ಆಧರಿಸಿ ಪ್ರಧಾನಿ ಯೋಗ ಮಾಡುತ್ತಿರುವ ಅಕ್ಕಪಕ್ಕ ಗಣೇಶ ಮೂರ್ತಿಗಳು ಇರುವ ಹಾಗೆಯೇ ಗಣೇಶ ಮೂರ್ತಿ ಹಾಗೂ ಮೋದಿ ವಿಗ್ರಹವನ್ನು ತಯಾರು ಮಾಡಿದ್ದಾರೆ.
"ಕಳೆದ ಎರಡು ಮೂರು ವರ್ಷಗಳಿಂದ ಕೋವಿಡ್ ಹಿನ್ನಲೆಯಲ್ಲಿ ವ್ಯಾಪಾರ ಕಡಿಮೆಯಿದ್ದು, ಈ ವರ್ಷ ಚೆನ್ನಾಗಿದೆ. ಆದರೆ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಸ್ವಲ್ಪ ತೊಂದರೆಯಾಗಿದೆ. ಆದರೂ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವವರು ಆರ್ಡರ್ ಮಾಡಿ ಗಣೇಶ ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ" ಎಂದು ಕಲಾವಿದ ರೇವಣ್ಣ ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದರು.
ವಿಶೇಷ ತಿಂಡಿಗಳು: ಗಣೇಶ ಮೂರ್ತಿಗಳು ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪನೆ ಮಾಡಲು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡಿದ್ದು, ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು ಕಡ್ಡಾಯವಾಗಿ ಅನುಮತಿ ಪಡೆದು ಪಾಲಿಕೆ ವತಿಯಿಂದ ಹಾಗೂ ಆ ಪ್ರದೇಶದ ಪೊಲೀಸ್ ಠಾಣೆಯಿಂದ ಪಡೆಯುವಂತೆ ತಿಳಿಸಲಾಗಿದೆ.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಈಗಾಗಲೇ ಬಡಾವಣೆಯ ಪ್ರದೇಶಗಳಲ್ಲಿ ವಾಟರ್ ಪ್ರೂಫ್ ಪೆಂಡಾಲ್ಗಳನ್ನು ಹಾಕಲಾಗುತ್ತಿದ್ದು, ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಿ ಕಡುಬು, ಒಬ್ಬಟ್ಟು, ಚಕಲಿ, ಕರ್ಜಿಕಾಯಿ, ಲಡ್ಡು ಸೇರಿದಂತೆ ಬಗೆ ಬಗೆಯ ತಿಂಡಿಗಳನ್ನು ಮಾಡಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ.
ಇದನ್ನೂ ಓದಿ: ಗಣೇಶೋತ್ಸವ ಆಚರಣೆ ಕುರಿತು ನ್ಯಾಯಾಲಯದ ತೀರ್ಪನ್ನು ಒಪ್ಪಲೇಬೇಕಾಗುತ್ತದೆ: ಸಿ ಟಿ ರವಿ