ಮೈಸೂರು: ಸಾ.ರಾ.ಮಹೇಶ್ಗೆ ಎಲ್ಲಾ ಗೊತ್ತು. ಅವನಿಗಿರುವಷ್ಟು ಬುದ್ಧಿವಂತಿಕೆ ನನಗೆ ಇಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತೀರುಗೇಟು ನೀಡಿದರು.
ಜಿಪಂ ಸಭಾಂಗಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು ಅವರವರ ಕೆಲಸ ಮಾಡುವುದಕ್ಕೆ ನಾನು ಬಿಡುತ್ತೇನೆ. ಆದರೆ ನಾನೇ ಎಲ್ಲವನ್ನು ಮಾಡಬೇಕು ಎನ್ನುವುದು ಸಾ.ರಾ.ಮಹೇಶ್ ಬುದ್ಧಿ. ಅವನಿಗೆ ಗೊತ್ತು, ಎಲ್ಲಿ ಏನ್ ಆಗಿದೆ ಎಂದು ವ್ಯಂಗ್ಯವಾಡಿದರು.
ಸಾ.ರಾ.ಮಹೇಶ್ ಏನು ಕೆಲಸ ಮಾಡುತ್ತಾನೆ ಅಂತ ಎಲ್ಲರಿಗೂ ಗೊತ್ತು. ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಯತ್ತ ಸಂಸ್ಥೆಗಳು. ಆದರ ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಎಲ್ಲವನ್ನೂ ನಾನ್ಯಾಕೆ ಮಾಡಲಿ? ನನಗೆ ಮಾಡೋದಕ್ಕೆ ಬೇರೆ ಕೆಲಸ ಇಲ್ವ?. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾ.ರಾ.ಮಹೇಶ್ ಅಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಸಿದ್ದು ಭೇಟಿ:
ನಾನು ಸಿದ್ದರಾಮಯ್ಯ ಭೇಟಿ ಮಾಡಿದ್ದು, ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಮಂಡಳಿ ನೇಮಕ ವಿಚಾರಕ್ಕಾಗಿ. ಆಡಳಿತಾಧಿಕಾರಿ ನೇಮಕ ಮಾಡುವುದಕ್ಕೆ ನನ್ನ ವಿರೋಧ ಇದೆ. ಗ್ರಾಮೀಣ ಭಾಗದಲ್ಲಿ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಗಾಂಧೀಜಿ ಕಂಡ ಸ್ವರಾಜ್ಯ ಕನಸಿಗೆ ಇದು ಮಾರಕ. ಜನಪ್ರತಿನಿಧಿಗಳು ಆಡಳಿತ ನಡೆಸಬೇಕು ಎನ್ನುವುದು ಅವರ ಕನಸು. ಮುಂದೆ ಚುನಾವಣೆ ನಡೆಯುವವರೆಗೂ ಅವರನ್ನೇ ಮುಂದುವರೆಸಬೇಕು ಎಂದರು.