ಮೈಸೂರು: ಧ್ರುವನಾರಾಯಣ್ ಅವರ ಮಕ್ಕಳು ಅಪ್ಪ-ಅಮ್ಮ ಇಬ್ಬರನ್ನೂ ಕಳೆದುಕೊಂಡು ನೋವಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಂಜನಗೂಡಿನಲ್ಲಿ ಜೆಡಿಎಸ್ ಸ್ಪರ್ಧೆ ಮಾಡಬೇಕೇ ಎಂಬ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಇಂದು ನಿಧನರಾದ ವೀಣಾ ಧ್ರುವನಾರಾಯಣ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಮಾಧ್ಯಮಗಳೂಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಧ್ರುವನಾರಾಯಣ್ ಮಕ್ಕಳು ಈಗ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡು ನೋವಿನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ಅವರಿಗೆ ಧೈರ್ಯ ಹೇಳಬೇಕು. ಜನರು ಅವರಿಗೆ ಶಕ್ತಿ ತುಂಬಬೇಕು ಎಂದರು.
ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ದರ್ಶನ್ ಧ್ರುವನಾರಾಯಣ್ ಎದುರು ಜೆಡಿಎಸ್‌ನಿಂದ ಅಭ್ಯರ್ಥಿ ಹಾಕುವುದಕ್ಕೆ ಮನಸ್ಸು ಒಪ್ಪುತ್ತಿಲ್ಲ. ಹೀಗಾಗಿ ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಅಂತಿಮ ದರ್ಶನ ಪಡೆದ ಶ್ರೀನಿವಾಸ್ ಪ್ರಸಾದ್ : ಧ್ರುವನಾರಾಯಣ್ ಪತ್ನಿ ವೀಣಾ ಅವರ ಅಂತಿಮ ದರ್ಶನ ಪಡೆದ ಶ್ರೀನಿವಾಸ್ ಪ್ರಸಾದ್ ಹಾಗೂ ಅಳಿಯ ಹರ್ಷವರ್ಧನ್ ಅವರು ಪುತ್ರ ದರ್ಶನ್ರನ್ನು ಸಂತೈಸಿದರು. ಬಹಳ ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧ್ರುವನಾರಾಯಣ್ ಅವರ ಪತ್ನಿಯವರ ನಿಧನದಿಂದ ನಮಗೆ ನೋವಾಗಿದೆ. ಇಬ್ಬರು ಮಕ್ಕಳಿಗೂ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ತನ್ವೀರ್ ಸೇಠ್, ಮಾಜಿ ಶಾಸಕ ಅನೀಲ್ ಚಿಕ್ಕಮಾದು, ಮಾಜಿ ಶಾಸಕ ವಾಸು ಸೇರಿದಂತೆ ಹಲವಾರು ಗಣ್ಯರು ವೀಣಾ ಧ್ರುವನಾರಾಯಣ್ ಮೃತದೇಹದ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ:ಆರ್ ಧ್ರುವನಾರಾಯಣ ಅಗಲಿಕೆಯ ಬೆನ್ನಲ್ಲೇ ಪತ್ನಿ ವೀಣಾ ಧ್ರುವನಾರಾಯಣ ವಿಧಿವಶ