ಮೈಸೂರು: ಚೀಟಿ ವ್ಯವಹಾರ ನಡೆಸಿ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ಸೇರಿದಂತೆ ಇತರ ಹಲವರಿಗೆ ಹೆಡ್ ಕಾನ್ಸ್ಟೇಬಲ್ ಸೋಮಶೇಖರ್ ಹಾಗೂ ಅವರ ಪತ್ನಿ ಸೇರಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಸ್ವತಃ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರು ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಮೈಸೂರಿನ ನಿವಾಸಿಗಳಾದ ಸೋಮಶೇಖರ್ ಹಾಗೂ ಪತ್ನಿ ದ್ರಾಕ್ಷಾಯಿಣಿ ಎಂಬುವವರು ಕಳೆದ 15 ವರ್ಷಗಳಿಂದ ಚೀಟಿ ವ್ಯವಹಾರ ನಡೆಸುತ್ತಿದ್ದರು. ಸೋಮಶೇಖರ್ ಹೆಡ್ಕಾನ್ಸ್ಟೇಬಲ್ ಆಗಿದ್ದು, ಪತ್ನಿ ದ್ರಾಕ್ಷಾಯಿಣಿ ನಗರದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಅವರು ಹಲವರಿಗೆ ಚೀಟಿಯ ಹಣ ಕೇಳಿದರೆ ನೀಡದೆ ವಂಚಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಇಲಾಖೆಯ ಹಲವರಿಗೆ ವಂಚನೆ: ಹೆಡ್ ಕಾನ್ಸ್ಟೇಬಲ್ ಸೋಮಶೇಖರ್ ತಾವು ಕೆಲಸ ಮಾಡುತ್ತಿದ್ದ ಇಲಾಖೆಯಲ್ಲಿ ಹಲವರಿಗೆ ಪರಿಚಯವಾಗಿದ್ದರಿಂದ ಇಲ್ಲಿನ ಹಲವರ ಬಳಿ ಚೀಟಿ ವ್ಯವಹಾರ ನಡೆಸುತ್ತಿದ್ದರು. ಕಳೆದ 15 ವರ್ಷಗಳಿಂದ ಯಾವುದೇ ತೊಂದರೆ ಇಲ್ಲದೇ ಚೀಟಿ ವ್ಯವಹಾರ ನಡೆಯುತ್ತಿತ್ತು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಚೀಟಿ ಹಣ ಕೊಡದೆ ಕೇಳಿದವರಿಗೆ ಸಬೂಬು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
"ಅವರ ಬಳಿ ಹಲವರು ಚೀಟಿ ವ್ಯವಹಾರ ಮಾಡಿಕೊಂಡಿದ್ದರು. ಚೀಟಿ ಹಣವನ್ನು ಕೇಳಲು ಮನೆ ಬಳಿ ಹೋದಾಗ ಅವರನ್ನು ಹೆದರಿಸಿ, ಬೆದರಿಕೆ ಹಾಕಿ ಕಳುಹಿಸುತ್ತಿದ್ದರು. ಮೊಬೈಲ್ ಫೋನ್ ಕರೆ ಮಾಡಿದಾಗ ಸ್ವಿಕರಿಸುತ್ತಿರಲಿಲ್ಲ. ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದೇನೆ. ಈ ಸಂಬಂಧ ಸೋಮಶೇಖರ್ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ" ಎಂದು ಅವರು(ಪೊಲೀಸ್) ತಿಳಿಸಿದ್ದಾರೆ.
ಪರಿಶೀಲನೆ ನಡೆಸಿ ಸೂಕ್ತ ಕ್ರಮ: ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ "ಆರೋಪಿ 3 ತಿಂಗಳಿನಿಂದ ಇಲಾಖೆಯಲ್ಲಿ ಇರಲಿಲ್ಲ. ಸೆಸ್ಕ್ಗೆ ನಿಯೋಜನೆಗೊಂಡಿದ್ದರು. ಅಲ್ಲಿಯೂ ಈವರೆಗೆ ಕೆಲಸಕ್ಕೆ ವರದಿ ಮಾಡಿಕೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಅವರನ್ನು ಅಮಾನತುಗೊಳಿಸಲಾಗದು. ಆದರೆ ಅವರು ಹಲವರಿಗೆ ಹಣ ವಂಚಿಸಿದ್ದ ಬಗ್ಗೆ ದೂರು ಬಂದಿದೆ. ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.
ಇದನ್ನೂ ಓದಿ: ನಟ ಮಾಸ್ಟರ್ ಆನಂದ್ ಪುತ್ರಿ ಹೆಸರಿನಲ್ಲಿ ಹಣ ದುರ್ಬಳಕೆ ಆರೋಪ: ಪತ್ನಿಯಿಂದ ಪ್ರಕರಣ ದಾಖಲು