ಮೈಸೂರು : 4 ಕೆ.ಜಿ ತೂಕ ಹೊಂದಿರುವ ಹೆಣ್ಣು ಮಗುವಿಗೆ ನಾಗರತ್ನಮ್ಮ(24) ಎಂಬವರು ನಗರದ ಮದರ್‌ಹುಡ್ ಆಸ್ಪತ್ರೆಯಲ್ಲಿ ಮಂಗಳವಾರ ಜನ್ಮ ನೀಡಿದ್ದಾರೆ. ಜಿಲ್ಲೆಯಲ್ಲಿ ಸಾಮಾನ್ಯ ಹೆರಿಗೆ ಮೂಲಕ ಜನಿಸಿದ ಮಕ್ಕಳಲ್ಲಿ ಈ ಹೆಣ್ಣು ಮಗು ಹೆಚ್ಚು ತೂಕ ಹೊಂದಿರುವುದು ವಿಶೇಷ. ಭಾರತೀಯ ಶಿಶುವಿನ ತೂಕ ಸಾಮಾನ್ಯಕ್ಕಿಂತ ಹೆಚ್ಚಿರುವುದು ಅಪರೂಪ. ಜನಿಸುವ ಸಮಯದಲ್ಲಿ ಸಾಮಾನ್ಯ ಶಿಶುವಿನ ತೂಕ ಸುಮಾರು 2.5 ರಿಂದ 3.5 ಕೆಜಿ ಇರುತ್ತದೆ.
ನಾಗರತ್ನಮ್ಮ ಅವರಿಗೆ ಇದು ಮೊದಲ ಗರ್ಭಾವಸ್ಥೆಯಾಗಿದೆ. ನಿಗದಿತ ವೈದ್ಯಕೀಯ ಪರೀಕ್ಷೆಗಳಿಗಾಗಿ ಆಕೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಗರ್ಭಾವಸ್ಥೆಯ ಉದ್ದಕ್ಕೂ ಆರೋಗ್ಯಯುತವಾಗಿದ್ದು, ವಿವಿಧ ಸ್ಕ್ಯಾನ್‌ಗಳ ಫಲಿತಾಂಶಗಳು ಸಾಮಾನ್ಯವಾಗಿದ್ದವು. ಗರ್ಭಾವಸ್ಥೆಯ 9ನೇ ತಿಂಗಳಲ್ಲಿ ಸ್ವಾಭಾವಿಕವಾಗಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಮದರ್‌ಹುಡ್ ಆಸ್ಪತ್ರೆಗೆ ದಾಖಲಾದ ನಂತರ ಅಗತ್ಯ ಆರೈಕೆ ಮತ್ತು ಚಿಕಿತ್ಸೆಗಳೊಂದಿಗೆ ವೈದ್ಯಕೀಯ ಸಹಾಯ ನೀಡಲಾಗಿತ್ತು.
ವೈದ್ಯರ ಪ್ರತಿಕ್ರಿಯೆ: ಮದರ್‌ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಸಲಹಾ ತಜ್ಞರು ಮತ್ತು ಮಹಿಳಾ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞೆ ಡಾ.ಶ್ವೇತಾ ನಾಯಕ್ ಮಾತನಾಡಿ, ‘‘ಇದು ನಮ್ಮ ಸಿಬ್ಬಂದಿ ಕಂಡ ಅಪರೂಪದ ಪ್ರಕರಣಗಳಲ್ಲಿ ಒಂದು. ಹೆರಿಗೆ ಕೊಠಡಿಯಲ್ಲಿ ಪ್ರತಿಯೊಬ್ಬರೂ ಅಚ್ಚರಿಗೊಳಗಾಗಿದ್ದರು. ಚಿಕಿತ್ಸೆ ಸಂಕೀರ್ಣವಾಗಿತ್ತು. ಶಿಶು ಗರ್ಭದಲ್ಲಿ ಸಿಲುಕಿ ಆಸ್ಫಿಕ್ಸಿಯಾ(ಮೆದುಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಕೊರತೆ)ದಿಂದ ಬಳಲುವ ಸಾಧ್ಯತೆಗಳಿದ್ದವು. ಆದರೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಶಿಶು,ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಮಧುಮೇಹೇತರ ತಾಯಿಗೆ ಜನಿಸಿದ ಅತಿಯಾದ ತೂಕದ ಅಪರೂಪದ ಪ್ರಕರಣವಿದು. ಇಂತಹ ಪ್ರಕರಣಗಳಲ್ಲಿ, ಮಹಿಳೆಗೆ ಸಾಮಾನ್ಯ ಹೆರಿಗೆಯ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಶಿಶು ಮತ್ತು ತಮ್ಮ ಆರೋಗ್ಯದೊಂದಿಗೆ ರಾಜಿ ಮಾಡಿಕೊಳ್ಳದೇ ನಿಗದಿತ ಪರೀಕ್ಷೆಗಳಿಗೆ ಒಳಗಾಗುವುದು ಕೂಡ ಮುಖ್ಯ" ಎಂದರು.
ಶಿಶು ಸಲಹಾತಜ್ಞ ಡಾ.ಚೇತನ್ ಬಿ. ಮಾತನಾಡಿ, ‘‘ಸಾಮಾನ್ಯವಾಗಿ ದೊಡ್ಡ ಗಾತ್ರದ ಶಿಶುಗಳನ್ನು ಹೊಂದಿರುವುದು ಕೆಲವು ಕುಟುಂಬಗಳಲ್ಲಿ ಕಂಡುಬರುವ ವಿಶೇಷ ಲಕ್ಷಣ. ಈ ಶಿಶುಗಳ ಹೆರಿಗೆ ಸವಾಲಿನದ್ದು. ಕೆಲವೊಮ್ಮೆ ಮೂಳೆಗಳು, ನರಗಳಿಗೆ ಜನನ ಸಂದರ್ಭದಲ್ಲಿ ಗಾಯಗಳಾಗುವ ಸನ್ನಿವೇಶ ಇರುತ್ತದೆ. ಆದರೆ ಮದರ್‌ಹುಡ್ ಆಸ್ಪತ್ರೆಯ ನಮ್ಮ ಹೆರಿಗೆ ತಂಡ ಶಿಶುವನ್ನು ಸುರಕ್ಷಿತ ಮತ್ತು ಸಾಮಾನ್ಯ ರೀತಿಯಲ್ಲಿ ಹೆರಿಗೆ ಮಾಡಿಸಿದೆ. ಶಿಶುವಿಗೆ ಯಾವುದೇ ಸಂಕೀರ್ಣ ತೊಂದರೆಗಳಿಲ್ಲ" ಎಂದು ಹೇಳಿದರು.
ಆಸ್ಪತ್ರೆ ಸೌಲಭ್ಯ ನಿರ್ದೇಶಕ ಸಂದೀಪ್ ಪಟೇಲ್ ಬಿ. ಮಾತನಾಡಿ, "ಹೆರಿಗೆಯಾದ ಮೂರನೇ ದಿನ ಸ್ಥಿರವಾದ ಆರೋಗ್ಯ ಸ್ಥಿತಿಯೊಂದಿಗೆ ತಾಯಿ ಮತ್ತು ಶಿಶುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ 'ಪ್ರಸಾದ್'.. ತಜ್ಞರ ಅಭಿಪ್ರಾಯ ಪಡೆಯುವಂತೆ ಜಿಟಿ ದೇವೇಗೌಡ ಪತ್ರ