ಮೈಸೂರು: ಮಾಜಿ ಸಚಿವರೂ ಮತ್ತು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕೋಟೆ ಶಿವಣ್ಣ ಅವರ ಮೈಸೂರಿನ ಮನೆಯಲ್ಲಿದ್ದ ಕಾರು ಕಳವಾಗಿದೆ. ಚಾಲಾಕಿ ಕಳ್ಳ ಕಾರು ಕಳವು ಮಾಡುತ್ತಿರುವ ದೃಶ್ಯ ಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಗೃಹ ಸಚಿವರಿಗೂ ಸಹ ಶಿವಣ್ಣ ಪತ್ರ ಬರೆದು ಮನವಿ ಮಾಡಿದ್ದಾರೆ.
ಮೈಸೂರಿನ ವಿಜಯನಗರದ 3ನೇ ಹಂತದಲ್ಲಿರುವ ಕೋಟೆ ಶಿವಣ್ಣ ಅವರ ಮನೆಯಲ್ಲಿದ್ದ ಕಾರನ್ನು ಚಾಲಾಕಿ ಖದೀಮನೊಬ್ಬ ರಾತ್ರೋ ರಾತ್ರಿ ಕಳವು ಮಾಡಿದ್ದಾನೆ. ಕಾರು ಕದಿಯುವಾಗ ಕಾರಿನಲ್ಲಿದ್ದ ಕೆಲವು ದಾಖಲೆಗಳು ಹಾಗೂ ಗಣಪತಿ ವಿಗ್ರಹವನ್ನು ಒಂದು ಕವರ್ನಲ್ಲಿ ಹಾಕಿ ಕಾರು ನಿಲ್ಲಿಸಿದ ಜಾಗದಲ್ಲಿಯೇ ಇಟ್ಟು ಹೋಗಿದ್ದಾನೆ.
ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆ: ರಾತ್ರಿ ಕಾರಿನ ಡ್ರೈವರ್ ಕಾರು ನಿಲ್ಲಿಸಿ, ಕೀ ಕೊಟ್ಟು ಹೋಗಿದ್ದ. ಮರುದಿನ ಬೆಳಗ್ಗೆ ಬಂದು ನೋಡಿದಾಗ ಕಾರು ಕಾಣಿಸಲಿಲ್ಲ. ತಕ್ಷಣ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯ ವೀಕ್ಷಿಸಿದಾಗ ಕಳ್ಳತನದ ದೃಶ್ಯ ಬಯಲಾಗಿದೆ. ಕಳ್ಳ ಕಾಂಪೌಂಡ್ ಹಾರಿ ಮನೆಯ ಹಿಂಬಾಗಿಲಿನಿಂದ ಮನೆಯೊಳಗೆ ಬಂದು ಮನೆಯ ಹಾಲ್ನಲ್ಲಿದ್ದ ಕಾರಿನ ಕೀಯನ್ನು ಎತ್ತಿಕೊಂಡು, ನಂತರ ಸುಮಾರು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಕಾರು ತೆಗೆದುಕೊಂಡು ಹೋಗಿದ್ದಾನೆ. ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಗೃಹ ಸಚಿವರಿಗೆ ಪತ್ರ ಬರೆದ ಶಿವಣ್ಣ: ಮಾಜಿ ಸಚಿವ ಶಿವಣ್ಣ ಅವರು, ಕಾರು ಕಳವಾದ ನಂತರ, ತಕ್ಷಣ ಸಮೀಪದ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಎಸಿಪಿ, ಡಿಸಿಪಿ, ಶ್ವಾನದಳ ಮತ್ತು ಬೆರಳಚ್ಚು ತಂತ್ರಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಅವರು ಕಳೆದ 10 ದಿನಗಳಲ್ಲಿ ಈ ಪ್ರದೇಶದಲ್ಲಿ 3 ಕಾರುಗಳು ಕಳವಾಗಿವೆ ಎಂದು ತಿಳಿಸಿದ್ದಾರೆ. ಈಗ ನಡೆದ ಪೊಲೀಸ್ ತನಿಖೆಯ ಸಂಪೂರ್ಣ ಮಾಹಿತಿ ತಿಳಿಸಿದ್ದು, ಇದೊಂದು ವ್ಯವಸ್ಥಿತ ಕೃತ್ಯ, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಾರುಗಳ ಕಳ್ಳತನ: 100ಕ್ಕೂ ಹೆಚ್ಚು ಕಾರುಗಳನ್ನು ಕದ್ದ ಇಬ್ಬರನ್ನು ಬಂಧಿಸಿದ ಕ್ರೈಂ ಬ್ರಾಂಚ್