ಮೈಸೂರು: ಪುತ್ರನಿಗಾಗಿ ಕ್ಷೇತ್ರವನ್ನು ತ್ಯಾಗ ಮಾಡುತ್ತಿರುವ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಸಿದ್ದಾರೆ.
ನಂಜನಗೂಡಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಹೈಕಮಾಂಡ್‌ಗೆ ಈಗಾಗಲೇ ನಾನು ಸೇರಿ ಒಟ್ಟು ಮೂವರು ಅರ್ಜಿ ಹಾಕಿದ್ದೇವೆ. ಅದರಲ್ಲಿ ಈ ಸ್ಥಳದಲ್ಲಿ ಇರುವ ವ್ಯಕ್ತಿಗೆ ಎಂದಿಗೂ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಸಿಕ್ಕರೂ ಸೋಲುವುದು ಖಚಿತ ಎಂಬುದು ಹೈಕಮಾಂಡ್‌ಗೆ ಮನವರಿಕೆಯಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿಗೆ ಪರೋಕ್ಷ ಟಾಂಗ್ ನೀಡಿದರು.
ನಾನು ಎ ಸ್ಥಾನದಲ್ಲಿದ್ದೇನೆ, ಮಾಜಿ ಸಂಸದರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಆರ್ ನಾರಾಯಣ್ ಬಿ ಸ್ಥಾನದಲ್ಲಿದ್ದಾರೆ. ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಿ ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ ಎಂದು ತಿಳಿಸಿದರು.
ಸಭೆಯಲ್ಲಿದ್ದ ಬೆಂಬಲಿಗರಿಗೆ ಪರೋಕ್ಷವಾಗಿ ಮುಂದಿನ ಸಾರ್ವತ್ರಿಕ ಚುನಾವಣೆಗೆ ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದು ಮಹದೇವಪ್ಪ ಸ್ವಯಂ ಘೋಷಿಸಿಕೊಂಡರು. ಮುಂದಿನ ಸಾರ್ವತ್ರಿಕ ಚುನಾವಣೆಗೆ ನಿಮ್ಮ ನೆಚ್ಚಿನ ನಾಯಕರೇ ಈ ಕ್ಷೇತ್ರದಲ್ಲಿ ಅಭ್ಯರ್ಥಿಯಾಗುತ್ತಾರೆ. ನನ್ನ ಬೆಂಬಲಿಗರಾದ ನೀವು ಇಟ್ಟಿರುವ ಆಸೆಯನ್ನು ಈಡೇರಿಸುತ್ತೇನೆ.
ಈಗಾಗಲೇ ಹೈಕಮಾಂಡ್‌ಗೆ ಎಲ್ಲ ಕ್ಷೇತ್ರದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನಾನೂ ಕೂಡ ನಂಜನಗೂಡು ಮೀಸಲು ವಿಧಾನಸಭೆ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಅರ್ಜಿ ಹಾಕಿದ್ದೇನೆ ಎಂದರು.
ಇದನ್ನೂ ಓದಿ:ಸರ್ಕಾರಿ ಅಧಿಕಾರಿಗಳ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಕಳ್ಳತನ: ಸಿದ್ದರಾಮಯ್ಯ