ಮೈಸೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸಂತ್ರಸ್ತೆ ಯುವತಿ ದೂರು-ಪ್ರತಿದೂರಿನ ಬಗ್ಗೆ ಎಸ್ಐಟಿ ನಿಷ್ಪಕ್ಷಪಾತ ತನಿಖೆ ಮಾಡಲಿ. ಸತ್ಯಾಂಶವನ್ನು ಹೊರತರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಹೂಟಗಳ್ಳಿಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಟಿ ತನಿಖೆಯ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಒತ್ತಡ ಹೇರಬಾರದು. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಯಾರು ಡಿಕೆಶಿ ಹೆಸರನ್ನ ಯಾರ ಹೇಳಿದ್ದಾರೆ?:
ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು ಬಂದ ವಿಚಾರವಾಗಿ ಮಾತನಾಡಿದ ಹೆಚ್ಡಿಕೆ, ಯಾರು ಅವರ ಹೆಸರನ್ನು ಹೇಳಿದ್ದಾರೆ? ಅವರ ಹೆಸರನ್ನು ಅವರೇ ಏಕೆ ಮುಂದೆ ಬಿಟ್ಟುಕೊಂಡಿದ್ದಾರೆ. ಅವರೇ ಮಾಡಿದ್ದಾರೆ ಅಂತ ಯಾರಾದ್ರು ಹೇಳಿದರೇ?. ರಾಜ್ಯದಲ್ಲಿ ಎಷ್ಟು ಜನ ಮಹಾನ್ ನಾಯಕರಿಲ್ಲ ಎಂದು ಕುಟುಕಿದರು.
ಡಿ.ಕೆ.ಶಿವಕುಮಾರ್ ಬಹಳ ಮೆಚುರ್ಡ್ ಪೊಲಿಟಿಶಿಯನ್. ಅವರಿಗೆ ಇರುವ ಅನುಭವ ನಮಗೂ ಇಲ್ಲ. ನಿನ್ನೆ ದುಡುಕಿ ಅವರ ಹೆಸರನ್ನು ಅವರೇ ಹೇಳಿದ್ದಾರೆ. ಯಾಕೆ ಈ ಪ್ರಕರಣಕ್ಕೆ ಅವರ ಹೆಸರು ಸಿಲುಕಿಸಿಕೊಳ್ಳಲು ಹೊರಟಿದ್ದಾರೆ ಗೊತ್ತಿಲ್ಲ ಎಂದರು.
ಇದನ್ನೂ ಓದಿ: ವಿಡಿಯೋ ನೋಡಿಲ್ಲ, ಮಾಹಿತಿ ಪಡೆದು ಮಾತನಾಡುವೆ: ಡಿ.ಕೆ.ಶಿವಕುಮಾರ್
'ಪ್ರಕರಣವನ್ನು ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ'
ಈ ಪ್ರಕರಣವನ್ನು ಎಲ್ಲರೂ ಹುಡುಕಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ಯಾರಿಗೂ ಗಂಭೀರತೆ ಇಲ್ಲ. ಇದರಿಂದ ರಾಜ್ಯದ ಗೌರವ ಹಾಳಾಗುತ್ತಿದೆ. ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
'ಜಿಟಿಡಿ ಪಕ್ಷಕ್ಕೆ ಸೇರಿಸಲ್ಲ'
ಜಿ.ಟಿ.ದೇವೇಗೌಡರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಲ್ಲ. ಈ ವಿಚಾರದಲ್ಲಿ ದೇವೇಗೌಡರ ಮನವೊಲಿಸುತ್ತೀನಿ ಎಂದರು.