ಮೈಸೂರು : ಹೆಚ್ ಡಿ ಕೋಟೆ ತಾಲೂಕಿನ ಕಳಸೂರು, ಮೂರುಬಂದ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಹುಲಿಯೊಂದು ಕಾಣಿಸಿದ್ದು, ಸಾಕಾನೆಗಳ ಮೂಲಕ ಅರಣ್ಯ ಇಲಾಖೆಯು ಅದನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಶುರು ಮಾಡಿದೆ. ಕಳೆದ 6 ದಿನಗಳಿಂದ ಅರಣ್ಯ ಇಲಾಖೆಯು ಹುಲಿಯ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಸುತ್ತಿದೆ. ಕಾರ್ಯಾಚರಣೆ ಚುರುಕುಗೊಳಿಸಲು ಬುಧವಾರ ಸಾಕಾನೆಗಳನ್ನು ಕರೆತರಲಾಯಿತು.
ತಾಲೂಕಿನ ಎನ್ ಬೇಗೂರು ವಲಯದ ಹುಲಿಯೊಂದು ಕಾಡಿನಿಂದ ಹೊರಬಂದಿರುವ ಸುಳಿವು ಪಡೆದುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ ಕಳೆದ 6 ದಿನಗಳಿಂದ ಹುಲಿಯ ಸೆರೆಗೆ ಸತತ ಪ್ರಯತ್ನ ನಡೆಸಿದ್ದಾರೆ. ಹುಲಿ ಸೆರೆಯಾಗದ ಪರಿಣಾಮ ಅರಣ್ಯ ಇಲಾಖೆಯು ಕಾರ್ಯಾಚರಣೆಯನ್ನು ತೀವ್ರಗೊಳಿಸಲು ಇಂದು ರಾಂಪುರ ಆನೆ ಶಿಬಿರದಿಂದ ಗಣೇಶ, ಪಾರ್ಥ ಹಾಗೂ ಜಯಪ್ರಕಾಶ ಎಂಬ ನಾಮಾಂಕಿತ ಆನೆಗಳನ್ನು ಕರೆಸಿ ಕಾರ್ಯಾಚರಣೆ ನಡೆಸಿದ್ದಾರೆ.
ಎನ್.ಬೇಗೂರು ವಲಯದ ಸುಮಾರು 10 ವರ್ಷದ ಗಂಡು ಹುಲಿ ಎಂದು ಹೇಳಲಾಗುತ್ತಿದ್ದು, ಕಾಡಂಚಿನ ಅಕ್ಕ-ಪಕ್ಕದ ಜಮೀನುಗಳಲ್ಲಿ ಮೇಯಲು ಬರುವ ಜಾನುವಾರಗಳನ್ನು ಹಿಡಿಯಲು ಕಾಡಿನಿಂದ ಹೊರ ಬಂದಿದೆ ಎನ್ನುತ್ತಿದ್ದಾರೆ ಸ್ಥಳೀಯರು. ಇಂದು ನಡೆದ ಕಾರ್ಯಾಚರಣೆಯಲ್ಲಿ ಎನ್.ಬೇಗೂರು ವಲಯ ಅರಣ್ಯಧಿಕಾರಿ ಚೇತನ್, ವಿಶೇಷ ಹುಲಿ ಸಂರಕ್ಷಣಾ ಪಡೆಯ ಡಿಆರ್ಎಫ್ಗಳು ಹಾಗೂ ಸಿಬ್ಬಂದಿ ವರ್ಗ ಇದ್ದರು.