ಮೈಸೂರು: ಚಾಮರಾಜೇಂದ್ರ ಮೃಗಾಲಯದ ಗಂಡು ಸಿಂಹ ರಾಜು ಮತ್ತು ಹೆಣ್ಣು ಸಿಂಹ ನಿರ್ಭಯಾಳಿಗೆ ಜನಿಸಿದ ಒಂದು ಹೆಣ್ಣು ಹಾಗೂ ಎರಡು ಗಂಡು ಮರಿಗಳಿಗೆ ಕ್ರಮವಾಗಿ ಕಬಿನಿ, ಸೂರ್ಯ ಹಾಗೂ ಚಂದ್ರ ಎಂದು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರು ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಈಶ್ವರ ಖಂಡ್ರೆ ಅವರು ನಾಮಕರಣ ಮಾಡಿದರು.
ಇಲ್ಲಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜನಿಸಿರುವ ಸಿಂಹದ ಮರಿಗಳಿಗೆ ಹೆಸರಿಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೊದಲ ಬಾರಿಗೆ ಮೃಗಾಲಯಕ್ಕೆ ಭೇಟಿ ನೀಡುತ್ತಿರುವುದು ನನಗೆ ಸಂತಸ ತಂದಿದೆ. ಭೂಮಿಯ ಮೇಲೆ ಕೀಟಗಳು, ಪಕ್ಷಿಗಳು ಹಾಗೂ ಪ್ರಾಣಿಗಳನ್ನು ಒಳಗೊಂಡಂತೆ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಮೃಗಾಲಯದಲ್ಲಿ ಎಲ್ಲಾ ಪ್ರಾಣಿಗಳನ್ನು ಸಿಬ್ಬಂದಿ ಬಹಳ ಚೆನ್ನಾಗಿ ಪೋಷಿಸುತ್ತಿದ್ದಾರೆ ಎಂದು ಮೃಗಾಲಯದ ಸಿಬ್ಬಂದಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
120 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ: ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳಲ್ಲಿ ಈ ಮೃಗಾಲಯವನ್ನು ಅಭಿವೃದ್ಧಿಪಡಿಸಲು ಹಾಗೂ ಭಾರತದಲ್ಲಿಯೇ ಉತ್ತಮ ಮೃಗಾಲಯವನ್ನಾಗಿಸಲು ಬೇಕಾದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ಮನುಷ್ಯನ ಜೀವ ಅತ್ಯಮೂಲ್ಯವಾಗಿದ್ದು, ಆನೆ ಹಾಗೂ ಚಿರತೆ ದಾಳಿಯನ್ನು ತಪ್ಪಿಸಲು ಈಗಾಗಲೇ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಕ್ಕಾಗಿ ರೈಲ್ವೆ ಬ್ರಿಡ್ಜ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು 120 ಕೋಟಿ ರೂ.ಗಳ ಅನುದಾನಕ್ಕೆ ಅನುಮೋದನೆ ನೀಡಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ದಸರಾಗೆ ಪೂರ್ವಸಿದ್ಧತೆ: ಮುಂಬರುವ ದಸರಾ ಮಹೋತ್ಸವಕ್ಕೆ ಇಲಾಖೆಯಿಂದ ನೀಡಬಹುದಾದ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರೈಸಲಾಗುವುದು. ಇದಕ್ಕಾಗಿ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಈ ಕುರಿತು ಅಧಿಕಾರಿಗಳು ಹಾಗೂ ಸಚಿವರೊಟ್ಟಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಸಚಿವ ಖಂಡ್ರೆ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಜಿ ವಿ ರಂಗರಾವ್, ಬೆಂಗಳೂರು ವನ್ಯಜೀವಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕುಮಾರ್ ಪುಷ್ಕರ್, ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಿ ಮಹೇಶ್ ಕುಮಾರ್, ಉಪ ನಿರ್ದೇಶಕರಾದ ಎ ಜೆ ರೋಷಿಣಿ ಹಾಗೂ ಸಹಾಯಕ ನಿರ್ದೇಶಕರಾದ ಡಾ. ಜೆ ಎಲ್ ಶ್ರೀನಿವಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: 75 ಗಂಟೆಗಳಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಸಿಂಹಿಣಿ.. 48 ಗಂಟೆಗಳಲ್ಲಿ ನಾಲ್ಕು ಮರಿಗಳು ಸಾವು
ಮೈಸೂರು ಮೃಗಾಲಯದಲ್ಲಿ ಹೈಟೆಕ್ ಶಿಶು ಆರೈಕೆ ಕೇಂದ್ರ: 125 ವರ್ಷ ಇತಿಹಾಸವಿರುವ ಮೈಸೂರಿನ ಪ್ರಸಿದ್ಧ ಜಯಚಾಮರಾಜೇಂದ್ರ ಮೃಗಾಲಯದೊಳಗೆ ಹೈಟೆಕ್ ಶಿಶು ಆರೈಕೆ ಕೇಂದ್ರವನ್ನು ತೆರೆಯಲಾಗಿದ್ದು, ಶಿಶು ಆರೈಕೆ ಕೇಂದ್ರವನ್ನು ಟೇಪ್ ಕತ್ತರಿಸುವ ಮೂಲಕ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಿಷಿಕಾ ಕುಮಾರಿ ಒಡೆಯರ್ ದಂಪತಿ ಇತ್ತೀಚೆಗೆ ಉದ್ಘಾಟಿಸಿದ್ದರು. ಮೃಗಾಲಯದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಆರೈಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ಹೈಟೆಕ್ ಶಿಶು ಆರೈಕೆ ಕೇಂದ್ರ ಉದ್ಘಾಟಿಸಿದ ಯದುವೀರ್ ದಂಪತಿ