ಮೈಸೂರು: ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಮನೆಯಲ್ಲಿದ್ದ 12 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ದೇವರಾಜ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಳೆದ ಆಗಸ್ಟ್ 29ರಂದು ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ವೀರಭದ್ರಯ್ಯ ರಂಗಮ್ಮ ಎಂಬ 85 ವಯಸ್ಸಿನ ವೃದ್ಧ ದಂಪತಿ ಮನೆಗೆ ನುಗ್ಗಿದ್ದ ದರೋಡೆಕೋರರು, ಅವರ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದಾರೆ. 12 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದರು. ಈ ಸಂಬಂಧ ತನಿಖೆ ಕೈಗೊಂಡ ಪೊಲೀಸರು, ಕದ್ದ ಚಿನ್ನಾಭಾರಣಗಳನ್ನು ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರಾಟ ಮಾಡುವಾಗ ಒಬ್ಬ ಕಳ್ಳ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಉಳಿದ 4 ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಇಬ್ರಾಹಿಂ ಅಹಮದ್, ಜಬೀವುಲ್ಲಾ ಷರೀಫ್, ಗಿರೀಶ್, ಸುರೇಶ್ ಮತ್ತು ಖಾಸಿಫ್ ಎಂಬುವವರನ್ನು ಬಂಧಿದಸಲಾಗಿದೆ.
ದರೋಡೆಗೆ ಪಕ್ಕದ ಮನೆಯವನೇ ಸುಳಿವು:
ವೃದ್ಧ ದಂಪತಿಯ ಪಕ್ಕದ ಮನೆಯಲ್ಲಿ ವಾಸವಿದ್ದ ಗಿರೀಶ್ ಎಂಬುವವ ಇತರರಿಗೆ ಮಾಹಿತಿ ನೀಡಿದ್ದ. ಆಟೋದಲ್ಲಿ ಬಂದು ದರೋಡೆಗೆ ಪ್ಲಾನ್ ಮಾಡಿಕೊಂಡು ಹೋಗಿದ್ದ ಆರೋಪಿಗಳು ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದವ ನೀಡಿದ್ದ ಸುಳಿವಿನ ಮೇರೆಗೆ ವೃದ್ಧ ದಂಪತಿಗಳ ಮನೆಗೆ ನುಗ್ಗಿ ದರೋಡೆ ಮಾಡಿದ್ದರು ಎಂಬ ಆರೋಪವಿದೆ.
ಇದರಲ್ಲಿ ಒಬ್ಬ ಆರೋಪಿ ಪಾಂಡವಪುರ ನಿವೃತ್ತ ಜಡ್ಜ್ ಮನೆಯ ಕಳ್ಳತನದಲ್ಲಿ ಭಾಗಿಯಾಗಿದ್ದು, ಉಳಿದ ಮೂವರು ಐಷಾರಾಮಿ ಜೀವನ ನಡೆಸಲು ಈ ಕೃತ್ಯದಲ್ಲಿ ಭಾಗಿಯಾಗಿದ್ದರು ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ. ಪಕ್ಕದ ಮನೆಯ ಗಿರೀಶ್ ಹಣಕಾಸು ಮುಗ್ಗಟ್ಟಿನಿಂದ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಎಂದರು.