ಮೈಸೂರು: ರಾಯಚೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ದರ್ಪ ತೋರಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಶರತ್ ಅವರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮೈಸೂರಿನ ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ರಾಯಚೂರಿನಲ್ಲಿ ನಾರಾಯಣಪುರದ ಎಡ ಹಾಗೂ ಬಲದಂಡೆ ನಾಲೆಗಳು, ತುಂಗ ಕಾಲುವೆಗಳು ಪ್ರವಾಹದಿಂದ ಒಡೆದು ಹೋಗಿದೆ. ಇದರಿಂದ ರೈತರಿಗೆ ಹಾಗೂ ಗ್ರಾಮಗಳಿಗೆ ತೊಂದರೆಯಾಗುತ್ತಿದ್ದು, ನಾಲೆಗಳನ್ನು ದುರಸ್ತಿಗೊಳಿಸಬೇಕು ಎಂದು ಪ್ರತಿಭಟನೆ ನಡೆಸುತ್ತಿದ್ದ ರೈತರ ಬಳಿ ಹೋಗಿ, ಮನವಿ ಸ್ವೀಕರಿಸದೇ ತಾನಿರುವ ಕಡೆ ಬನ್ನಿ ಎಂದು ಜಿಲ್ಲಾಧಿಕಾರಿ ದರ್ಪ ತೋರಿಸಿದ್ದು, ಅಲ್ಲದೇ ರೈತರನ್ನು ಬಂಧಿಸಲು ಸೂಚನೆ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.