ಮೈಸೂರು : ಟಿಟಿ ಎಂದು ಪ್ರಯಾಣಿಕರಿಂದ ಹಣ ಪೀಕಿಸುತ್ತಿದ್ದ ನಕಲಿ ಟಿಟಿಯನ್ನು ರೈಲ್ವೆ ಪೊಲೀಸರು ಬಂಧಿಸಿರುವ ಪ್ರಕರಣ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಲ್ಲೇಶ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿಯು ಕಳೆದ 6 ತಿಂಗಳುಗಳಿಂದ ಟಿಟಿ ರೂಪದಲ್ಲಿ ರೈಲು ಪ್ರಯಾಣಿಕರಿಂದ ಹಣ ವಸೂಲಿ ಮಾಡಿದ್ದು, ಇಂದು ಅಜ್ಮೇರ್ ರೈಲಿನಲ್ಲಿ ಟಿಟಿಯ ಸೋಗಿನಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಿಕ್ಕಿಬಿದ್ದಿದ್ದಾನೆ.
ಅಸಲಿ ಟಿಟಿಯಂತೆ ಐಡಿ ಕಾರ್ಡ್, ವಾಕಿಟಾಕಿಯೊಂದಿಗೆ ವಾರಕ್ಕೊಮ್ಮೆ ರೈಲು ಪರಿಶೀಲನೆಗೆ ಬರುತ್ತಿದ್ದ ಮಲ್ಲೇಶ್ ದೂರದ ಊರುಗಳಿಗೆ ಕ್ರಮಿಸುವ ರೈಲುಗಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದ. ಆರೋಪಿಯು ಹಣ ಪಡೆದು ಸೀಟು ಕೊಡಿಸುವುದಾಗಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಕಳೆದ 6 ತಿಂಗಳುಗಳಿಂದ ಸುಮಾರು 70 ಸಾವಿರಕ್ಕೂ ಅಧಿಕ ಹಣ ವಸೂಲಿ ಮಾಡಿದ್ದು, ಬಂದ ಹಣವನ್ನು ಮೋಜು ಮಸ್ತಿಗೆ ಖರ್ಚು ಮಾಡುತ್ತಿದ್ದ ಎನ್ನಲಾಗ್ತಿದೆ. ಇದೇ ಸಂದರ್ಭದಲ್ಲಿ ಅಜ್ಮೇರ್ ರೈಲಿನಲ್ಲಿ ಟಿಟಿಯಂತೆ ಕಾರ್ಯ ನಿರ್ವಹಿಸುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸದ್ಯ ರೈಲ್ವೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಓದಿ : ಗ್ಯಾರೇಜಿನಿಂದ ಹಿಮ್ಮುಖವಾಗಿ ಚಲಿಸಿದ ಕಾರು: ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ,ವಾಹನಗಳು ಜಖಂ