ಮೈಸೂರು : ಯುವತಿಯೊಬ್ಬಳು ನಕಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆದು ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೇಘಾ ಅಲಿಯಾಸ್ ಹರಿಣಿ ಎಂಬ ಯುವತಿಯನ್ನು ಬಂಧಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ಈಕೆ, ಯುವಕರಿಗೆ ಬಲೆ ಬೀಸುತ್ತಿದ್ದಳು. ಬಳಿಕ ಅವರಿಂದ ಹಣ ಪೀಕಿ ವಂಚನೆ ಮಾಡುತ್ತಿದ್ದಳು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಹೀಗೆಯೇ ಲಕ್ಷಾಂತರ ರೂಪಾಯಿ ಹಾಗೂ ಆಭರಣಗಳನ್ನು ಲಪಟಾಯಿಸಿರುವುದೂ ಪತ್ತೆಯಾಗಿದೆ.
ಯುವತಿ ಚಿನ್ನು ಗೌಡ ಎಂಬ ಹೆಸರಿನಲ್ಲಿ ನಕಲಿ ಖಾತೆ ಹೊಂದಿದ್ದಳು. ರವಿ ಎಂಬ ವ್ಯಕ್ತಿಗೆ ಜಾಲ ಬೀಸಿದ್ದ ಈಕೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ರವಿ ಸಹ ಚಿನ್ನು ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದ. ಆಗ ಮೇಘಾ ಬೇರೆಯವರ ಫೋಟೋಗಳನ್ನು ತನ್ನದೇ ಫೋಟೋ ಎಂದು ಕಳುಹಿಸಿ ಪರಿಚಯ ಮಾಡಿಕೊಂಡಿದ್ದಾಳೆ.
ತನ್ನ ತಂದೆಯ 2 ಪೆಟ್ರೋಲ್ ಬಂಕ್ ಮತ್ತು ಬಾರ್ ಇರುವುದಾಗಿ ಹೇಳಿದ್ದಾಳೆ. ಬಳಿಕ ಆತನಿಂದ ಲಕ್ಷಾಂತರ ಹಣ ಪೀಕಿ ವಂಚಿಸಿದ್ದಾಳೆ. ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೇಘಾ ಅಲಿಯಾಸ್ ಹರಿಣಿಯನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಹಲವರಿಗೆ ಹೀಗೆಯೇ ವಂಚನೆ ಮಾಡಿರುವ ವಿಚಾರವೂ ಬೆಳಕಿಗೆ ಬಂದಿದೆ.