ಮೈಸೂರು: ಸಮಾಜದ ಮುಖ್ಯ ವಾಹಿನಿಗೆ ದಲಿತರು ಬರಬೇಕು, ಆ ದೃಷ್ಟಿಯಿಂದ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಇಂದು ಮೈಸೂರಿನ ಮಂಜುನಾಥಪುರ ದಲಿತ ಕಾಲೋನಿಗೆ ಅನಾರೋಗ್ಯದ ನಡುವೆಯೂ ವೀಲ್ ಚೇರ್ನಲ್ಲಿ ಸುರಿವ ಮಳೆಯಲ್ಲೇ ಪಾದಯಾತ್ರೆ ಮಾಡಿದ ಪೇಜಾವರ ಶ್ರೀಗಳು, ನಂತರ ಮಾಧ್ಯಮಗಳ ಜೊತೆ ಮಾತನಾಡಿ ನನಗೆ ಅನಾರೋಗ್ಯ ಇದ್ದರೂ ಜನ ಅಪೇಕ್ಷೆ ಪಟ್ಟಿರುವುದರಿಂದ ನಾನು ಮಳೆಯಲ್ಲೇ ಪಾದಯಾತ್ರೆಗೆ ಬಂದಿದ್ದೇನೆ ಎಂದರು.
ನಮ್ಮ ಉದ್ದೇಶ ದಲಿತರು ಸಹ ಹಿಂದೂಗಳೇ, ಅವರು ಕೀಳರಿಮೆಯಿಲ್ಲದೆ ಸಮಾಜದ ಮುಖ್ಯವಾಹಿನಿಗೆ ಬರಬೇಕು ಅದಕ್ಕಾಗಿ ನಾವು ಪಾದಯಾತ್ರೆಯ ಮೂಲಕ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಾಗಿದ್ದು, ಅವರು ಸಹ ಸಂತೋಷದಿಂದ ನಮ್ಮ ಜೊತೆ ಬಾಳುವಂತಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಬದಲಾವಣೆ ಆಗಬೇಕಾಗಿದೆ, ನಗರದಲ್ಲಿ ಒಳ್ಳೆಯ ಏರಿಯಾಗಳಲ್ಲಿ ಅವರಿಗೆ ಬಾಡಿಗೆ ಮನೆ ಸಿಗುವುದಿಲ್ಲ, ಹಳ್ಳಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂದೂ ಸಮಾಜ ಇನ್ನೂ ಬದಲಾವಣೆ ಆಗಿಲ್ಲ, ಶೀಘ್ರವೇ ಬದಲಾವಣೆ ಆಗಬೇಕಿದೆ. ಅಸಮಾನತೆ ತೊರೆದು ನಾವುಗಳು ಅವರ ಜೊತೆ ಬದುಕಬೇಕು ಎಂದಿದ್ದಾರೆ.