ಮೈಸೂರು : ಮನೆ ಕಟ್ಟಬೇಕೆಂದರೆ ಸಿಮೆಂಟ್, ಕಬ್ಬಿಣ, ಇಟ್ಟಿಗೆ, ಮರಳು, ಕಲ್ಲು ಇತ್ಯಾದಿ ವಸ್ತುಗಳನ್ನು ಬಳಸುವುದು ಸಾಮಾನ್ಯ. ಆದರೆ, ಹಳೇ ಕಾಲದಲ್ಲಿ ಮಣ್ಣಿನಿಂದಲೇ ಗಟ್ಟಿಮುಟ್ಟಾದ ಮನೆಗಳನ್ನು ನಿರ್ಮಿಸುತ್ತಿದ್ದರು. ಅದರಂತೆ ಇದೀಗ ಮೈಸೂರಿನ ಕಟ್ಟಡ ನಿರ್ಮಾಣ ಸಂಸ್ಥೆಯೊಂದು ಹಳೇ ಕಾಲದ ಮಣ್ಣಿನ ಮನೆಯ ಪರಿಕಲ್ಪನೆಯಲ್ಲಿ ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮನೆಗಳನ್ನು ನಿರ್ಮಾಣ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ.
ಹಿಂದೆಲ್ಲಾ ಮಣ್ಣಿನಿಂದ ಗಟ್ಟಿಮುಟ್ಟಾದ ಮನೆಗಳನ್ನು ಕಟ್ಟುತ್ತಿದ್ದರು. ಅವು ಅನೇಕ ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆಧುನಿಕತೆ ಬೆಳೆದಂತೆ ಸಿಮೆಂಟ್ ಆವಿಷ್ಕಾರವಾಗಿ ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದರು. ಇತ್ತೀಚೆಗೆ ಮಣ್ಣನ್ನು ಬಳಸಿ ಯಾರೂ ಕೂಡ ಮನೆ ಕಟ್ಟುವುದಿಲ್ಲ. ಆದರೆ, ಮೈಸೂರಿನ ಆರ್-ಲೀಫ್ ಎಂಬ ಕಟ್ಟಡ ನಿರ್ಮಾಣ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ಮಣ್ಣಿನ ಮನೆಗಳನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟಿದೆ.
ಈಗಾಗಲೇ ಈ ಸಂಸ್ಥೆಯು ಮೈಸೂರಿನಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮಣ್ಣಿನ ಮನೆಗಳನ್ನು ನಿರ್ಮಾಣ ಮಾಡಿದೆ. ಮಣ್ಣಿನ ಮನೆ ನಿರ್ಮಾಣವು ಸಾಮಾನ್ಯ ಮನೆಗಳ ನಿರ್ಮಾಣಕ್ಕಿಂತ ಶೇ.10ರಿಂದ ಶೇ.30ರಷ್ಟು ಕಡಿಮೆ ವೆಚ್ಚದಲ್ಲಿ ನಿರ್ಮಾಣ ಮಾಡಬಹುದು. ಮನೆಗೆ ಮಂಗಳೂರು ಹಂಚುಗಳನ್ನು ಹಾಕಲಾಗಿದ್ದು, ಇದರ ಜೊತೆಗೆ ಕಾಂಕ್ರೀಟ್ ತಾರಸಿಯನ್ನು ಹಾಕಲಾಗುತ್ತದೆ.
ಮಣ್ಣಿನ ಮನೆಯು ಪರಿಸರ ಸ್ನೇಹಿಯಾಗಿದ್ದು, ಯಾವುದೇ ಸಿಮೆಂಟ್, ಮರಳು ಬಳಸದೇ ಬರೀ ಮಣ್ಣಿನಿಂದ ಒಂದಸ್ತಿನ ಮನೆಯನ್ನು ನಿರ್ಮಾಣ ಮಾಡಬಹುದು. ಮಣ್ಣಿನ ಮನೆಯಾಗಿರುವುದರಿಂದ ಹೆಚ್ಚು ಉಷ್ಣಾಂಶವನ್ಮು ಕಟ್ಟಡ ಹೀರಿಕೊಳ್ಳುವುದಿಲ್ಲ. ಹೀಗಾಗಿ, ಮನೆಯ ಒಳ ಭಾಗ ತಂಪಾಗಿರುತ್ತದೆ ಎಂದು ಆರ್-ಲೀಫ್ ಸಂಸ್ಥೆಯ ಮುಖ್ಯಸ್ಥರಾದ ಎಂ.ರಾಜೇಶ್ ಕುಮಾರ್ ಜೈನ್ ಅವರು ದೂರವಾಣಿಯಲ್ಲಿ ಈಟಿವಿ ಭಾರತಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ನೋಡಿ: ಗರಿಬಿಚ್ಚಿ ಸಂಭ್ರಮಿಸಿದ ನವಿಲು; ನಯನ ಮನೋಹರ ದೃಶ್ಯ
ಜೊತೆಗೆ ಕಟ್ಟಡ ತ್ಯಾಜ್ಯವಾದ ಡೆಬ್ರಿಸ್ ಬಳಸಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಮೈಸೂರು, ನಂಜನಗೂಡು ಸೇರಿದಂತೆ ರಾಜ್ಯದಲ್ಲಿರುವ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಹಾಗೂ ವಾಸ್ತುಶಿಲ್ಪ ಕಾಲೇಜುಗಳ ವಿದ್ಯಾರ್ಥಿಗಳಿಗೂ ಮಣ್ಣಿನ ಕಟ್ಟಡ ನಿರ್ಮಾಣದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ಎಂ ರಾಜೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.