ಮೈಸೂರು: ನಮಗೆ ಮನೆ ಕೊಡಿ, ಇಲ್ಲದಿದ್ದರೆ ಇಲ್ಲಿಯೇ ಜೀವ ಬಿಡುತ್ತೇವೆಂದು ಅತಂತ್ರ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ವೃದ್ಧ ದಂಪತಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ ನಡೆದಿದೆ.
ಕಳೆದ ಬಾರಿ ಸುರಿದ ಧಾರಾಕಾರ ಮಳೆಗೆ ಕುರಿಹುಂಡಿ ಗ್ರಾಮದ ಕೃಷ್ಣಯ್ಯ, ಸಣ್ಣತಾಯಮ್ಮ ಎನ್ನುವ ದಂಪತಿಯ ಮನೆ ಕುಸಿದು ಬಿದ್ದಿದ್ದು, ವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ದಂಪತಿಗೆ ಗಂಡು ಮಕ್ಕಳಿಲ್ಲ, ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿದ್ದಾರೆ. ಇದೀಗ ಇದ್ದ ಮನೆಯೊಂದನ್ನು ಕಳೆದುಕೊಂಡು, ನಮ್ಮನ್ನು ನೋಡಿಕೊಳ್ಳಲು ಯಾರು ಇಲ್ಲವೆಂದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಮನೆ ಗೋಡೆ ಕುಸಿದ ವೇಳೆ ಗ್ರಾಮ ಪಂಚಾಯತ್, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಳೆ ಮನೆ ತೆರವುಗೊಳಿಸಿ ಹೊಸ ಮನೆ ನಿರ್ಮಿಸಿ ಕೊಡುತ್ತೇವೆಂದು ಭರವಸೆ ನೀಡಿದ್ದರು. 8 ತಿಂಗಳ ಹಿಂದೆ ಮನೆ ಕೊಡುತ್ತೇವೆಂದು ಹೇಳಿ ಹೋದವರು ಇತ್ತ ತಿರುಗಿ ನೋಡಿಲ್ಲ. ನಾವು ಬೇರೆಯವರ ಮನೆಯಲ್ಲಿ ವಾಸ ಮಾಡುತ್ತಿದ್ದು, ಆ ಮನೆಯ ಮಾಲೀಕರು ಕೂಡ ಖಾಲಿ ಮಾಡಿ ಎಂದು ಹೇಳುತ್ತಿದ್ದಾರೆ ಅಂತ ದಂಪತಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಹನೂರಲ್ಲಿ ಸಿಡಿಲು ಬಡಿದು ಮನೆ ಕುಸಿತ: ಇಬ್ಬರಿಗೆ ಗಾಯ
ಮನೆ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯತ್ಗೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ನಮ್ಮ ಹೆಸರು ಕೈ ಬಿಟ್ಟಿದ್ದಾರೆ. ಅರ್ಹ ಫಲಾನುಭವಿಗಳಿಗೆ ಮನೆ ನೀಡಿಲ್ಲವೆಂದು ಗಂಭೀರ ಆರೋಪ ಮಾಡಿದ ಅವರು, ನಮಗೆ ಮನೆ ಕೊಡದಿದ್ದರೆ ಗ್ರಾಮ ಪಂಚಾಯತ್ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮಳೆ ಆರ್ಭಟಕ್ಕೆ ಮನೆ ಕುಸಿತ.. ಪ್ರಾಣಾಪಾಯದಿಂದ ಪಾರಾದ ವೃದ್ಧ ದಂಪತಿ