ಮೈಸೂರು: ಸೆಪ್ಟೆಂಬರ್ 21ರಂದು ಶಾಲೆಗಳು ಆರಂಭವಾಗುತ್ತವೆ. ಆದರೆ ತರಗತಿಗಳು ಪ್ರಾರಂಭವಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆದೇಶದಂತೆ 9ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಾಲೆಗೆ ಬಂದು ಏನಾದರೂ ಸಂಶಯವಿದ್ದರೆ ಬಗೆಹರಿಸಿಕೊಳ್ಳಬಹುದು. ಆದರೆ ಸೆಪ್ಟೆಂಬರ್ 21ರಿಂದ ತರಗತಿ ನಡೆಸುವಂತಿಲ್ಲ. ಈ ಅವಧಿಯಲ್ಲಿ ರೆಗ್ಯೂಲರ್ ಕ್ಲಾಸ್ ನಡೆಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಕೇಂದ್ರ ಸರ್ಕಾರದ ಅನುಮತಿ ಬಂದ ತಕ್ಷಣ ತರಗತಿಗಳ ಪ್ರಾರಂಭಕ್ಕೆ ದಿನಾಂಕವನ್ನು ನಾವು ಘೋಷಣೆ ಮಾಡುತ್ತೇವೆ ಎಂದಿದ್ದಾರೆ.
1 ರಿಂದ 10ನೇ ತರಗತಿವರೆಗೆ ಸೆಪ್ಟೆಂಬರ್ 30ರೊಳಗೆ ವಿದ್ಯಾರ್ಥಿಗಳ ದಾಖಲಾತಿಗಳನ್ನು ಪೂರ್ಣಗೊಳಿಸಬೇಕು. ಒಂದು ಅವಧಿಗೆ ಮಾತ್ರ ಫೀಸ್ ತೆಗೆದುಕೊಳ್ಳಬೇಕು. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಗೆ ವರ್ಗಾವಣೆ ಪತ್ರ(ಟಿಸಿ) ಕೊಡಲು ತೊಂದರೆ ಮಾಡಿದರೆ ಸ್ಥಳೀಯ ಬಿಇಒಗೆ ದೂರು ನೀಡಬೇಕು ಅಥವಾ ಬಿಇಒ ಕಚೇರಿಯಲ್ಲಿ ಟಿಸಿ ಕೊಡುವ ಅವಕಾಶವಿದ್ದು, ಖಾಸಗಿ ಶಾಲೆಗಳು ತೊಂದರೆ ಮಾಡಿದರೆ ಬಿಇಒ ಕಚೇರಿಯಿಂದ ಟಿಸಿ ಪಡೆಯಬಹುದು ಎಂದು ಸಚಿವರು ಹೇಳಿದರು.
ಈಗಾಗಲೇ ಡಿಡಿ ಚಂದನದಲ್ಲಿ ವಿದ್ಯಾಗಮ ಮೂಲಕ ಶಿಕ್ಷಣ ನೀಡುತ್ತಿದ್ದು, ಅದನ್ನು ಮುಂದುವರೆಸುವುದಾಗಿ ಹೇಳಿದ ಸಚಿವರು, ಕೋವಿಡ್ ನಂತರ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ. ಖಾಸಗಿ ಶಾಲೆಯಿಂದ ಎಷ್ಟು ಜನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಬಂದರೂ ನೋಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.