ಮೈಸೂರು : ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ತಯಾರಿಸಿದ ವಿಶೇಷ ಕರಕುಶಲ ಉತ್ಪನ್ನಗಳು, ವಿವಿಧ ತಿಂಡಿ-ತಿನಿಸುಗಳು ಹಾಗೂ ಇನ್ನಿತರ ವಸ್ತುಗಳ ಮಾರಾಟಕ್ಕೆಂದು ಆರಂಭವಾಗಿರುವ 25ನೇ ‘ಹುನಾರ್ ಹಾತ್' ಕರಕುಶಲ ಮೇಳಕ್ಕೆ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಚಾಲನೆ ನೀಡಿದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಎನ್‌ಎಂಡಿಎಫ್‌ಸಿ ವತಿಯಿಂದ ಹುನಾರ್ ಹಾತ್ ಪ್ರದರ್ಶನ ಫೆ.6ರಿಂದ 14ರವರೆಗೆ ನಡೆಯಲಿದೆ. ಆತ್ಮ ನಿರ್ಭರ ಭಾರತ್ ಯೋಜನೆಯನ್ನು ಪ್ರೋತ್ಸಾಹಿಸುವ ಜತೆಗೆ ದೇಶದ ಹಲವು ಕಲೆ ಮತ್ತು ಸಂಸ್ಕೃತಿಯನ್ನು ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ಕಾರ್ಯಕ್ರಮ ಉದ್ಘಾಟಿಸಿ ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಆತ್ಮನಿರ್ಭರ ಯೋಜನೆಗೆ ಪೂರಕವಾಗಿ, ವೋಕಲ್ ಫಾರ್ ಲೋಕಲ್ ಘೋಷಣೆಗೆ ಪುಷ್ಠಿ ನೀಡುವಂತೆ ದೇಶೀಯ ಉತ್ಪನ್ನಗಳ ಹುನಾರ್ ಹಾತ್‌ನ ಆಯೋಜಿಸಲಾಗಿದೆ. ಈ ಮೇಳ ಈಗಾಗಲೇ 24 ಬಾರಿ ದೇಶದ ವಿವಿಧ ಭಾಗಗಳಲ್ಲಿ ನಡೆದಿದೆ. ಕರ್ನಾಟಕದಲ್ಲಿ ಮೊದಲನೆಯ ಬಾರಿಗೆ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.
ಭಾರತದಲ್ಲಿ ನೂರಾರು ಧರ್ಮ, ಜಾತಿ, ಆಚಾರ-ವಿಚಾರ, ಸಂಸ್ಕೃತಿ ಇದೆ. ಈ ಮೇಳ ವಿವಿಧ ರೀತಿಯ ಕರಕುಶಲ, ಕಲಾತ್ಮಕ ವಸ್ತುಗಳ ಮೂಲಕ ಆಯಾ ಸಂಸ್ಕೃತಿ, ಧರ್ಮವನ್ನು ಪ್ರತಿನಿಧಿಸುತ್ತದೆ. ದೇಶದಲ್ಲಿ ಬೃಹತ್ ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗುವಂತೆ ಸಣ್ಣಪುಟ್ಟ ಕರಕುಶಲ ಕೆಲಸಗಳನ್ನು ಮಾಡುವವರ ಸಂಖ್ಯೆಯೂ ಹೆಚ್ಚಳವಾಗಬೇಕು. ಮೈಸೂರು ಸಿಲ್ಕ್ ಸೀರೆ, ಚನ್ನಪಟ್ಟಣ ಗೊಂಬೆಗಳು ಮತ್ತಿತರ ಸ್ಥಳೀಯ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬೇಕು ಎಂದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ನಮ್ಮ ದೇಶದ ಸ್ಥಳೀಯ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇದರ ಭಾಗವಾಗಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಹುನಾರ್ ಹಾತ್ ಆಯೋಜನೆಯಾಗಿದೆ.
ದೇಶದ ಬೇರೆ ಬೇರೆ ಭಾಗದ ವಿಶಿಷ್ಟ ಉತ್ಪನ್ನಗಳು ಇಲ್ಲಿವೆ. ಮೋದಿ ಪ್ರಧಾನಿಯಾದ ನಂತರ ನಮ್ಮ ಯೋಗಕ್ಕೆ ಮನ್ನಣೆ ಹೆಚ್ಚಾಯಿತು, ಆಯುಷ್ ಸಚಿವಾಲಯ ಸ್ಥಾಪನೆಯಾಯಿತು. ಈಗ ಕರಕುಶಲ ವಸ್ತುಗಳ ಬಳಕೆ ಹೆಚ್ಚಾಗುತ್ತಿರುವುದು ಸಂತಸ ತಂದಿದೆ ಎಂದರು.
ರಾಜ್ಯ ಯುವಜನ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ ನಾರಾಯಣಗೌಡ ಮಾತನಾಡಿ, ದೇಶೀಯ ಉತ್ಪನ್ನಗಳಿಗೆ ಹುನಾರ್ ಹಾತ್ ಅತ್ಯುತ್ತಮ ವೇದಿಕೆ. ನಾವು ಮುಂಚೆಯೆಲ್ಲಾ ಚೀನಾದ ಆಟಿಕೆ, ಗೊಂಬೆಗಳನ್ನು ಮಕ್ಕಳಿಗೆ ತಂದು ಕೊಡುತ್ತಿದ್ದೆವು. ಈಗ ಅದರ ಬದಲು ಚೆನ್ನಪಟ್ಟಣದ ಗೊಂಬೆಗಳನ್ನು ಬಳಸಬೇಕು. ನಮ್ಮಲ್ಲಿನ ಉತ್ಪನ್ನಗಳು ಎಷ್ಟು ಅತ್ಯುತ್ತಮವಾಗಿದ್ದರೂ ಮಾರುಕಟ್ಟೆ ಕೊರತೆ ಇದೆ. ಇದನ್ನು ಸರಿಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಕ್ರೀಡಾ ಹಾಸ್ಟೆಲ್ಗೆ ಸಚಿವ ನಾರಾಯಣಗೌಡ ದಿಢೀರ್ ಭೇಟಿ : ಅಧಿಕಾರಿಗಳಿಗೆ ತರಾಟೆ