ಮೈಸೂರು : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎನ್ಆರ್ಸಿ ಹಾಗೂ ಸಿಎಎ ಕಾಯ್ದೆ ವಿರೋಧಿಸಿ ವರುಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಡಾ.ಯತೀಂದ್ರ ಸಿದ್ದರಾಮಯ್ಯ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ಕಾಯ್ದೆಯನ್ನ ಹಿಂಪಡೆಯುವವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ. ನಮ್ಮ ಪ್ರತಿಭಟನೆಯನ್ನು ಇಂದು ಪೊಲೀಸರು ತಡೆದಿದ್ದಾರೆ. ನಾವು ಹಿಂದೆ ಪ್ರತಿಭಟನೆ ಮಾಡಲು ಮುಂದಾದಾಗ 144 ಸೆಕ್ಷನ್ ಜಾರಿ ಮಾಡಿದ್ರು. ಈಗಲೂ ಸಹ ಅದನ್ನೇ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಯಾವಾಗ ನಿಷೇಧಾಜ್ಞೆ ತೆರವು ಮಾಡುತ್ತೀರಾ? ಎಂಬ ಪ್ರಶ್ನೆಗೆ ಪೊಲೀಸರ ಬಳಿ ಉತ್ತರವಿಲ್ಲ. ಇದು ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವಷ್ಟೇ. ನಗರದಲ್ಲಿ ಪ್ರತಿಭಟನೆಗಳು ನಡೆದರೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಆದರೂ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇಲ್ಲಿ ಅದರ ಅವಶ್ಯಕತೆ ಇಲ್ಲ. ಪ್ರತಿಭಟನೆ ಮಾಡುವವರೆಲ್ಲ ಹಿಂಸಾಚಾರಿ, ರೌಡಿಶೀಟರ್ಗಳಲ್ಲ. ಇದು ನಮ್ಮ ಪ್ರಜೆಗಳಿಗೆ ಮಾಡುತ್ತಿರುವ ಅವಮಾನ. ಇದು ನೂರಕ್ಕೆ ನೂರರಷ್ಟು ರಾಜಕೀಯ ಹುನ್ನಾರ. ಕೇವಲ ಮೂರು ದೇಶಗಳಿಗೆ ಮಾತ್ರ ಪೌರತ್ವ ಕಾಯ್ದೆ ಜಾರಿ ಮಾಡಿದ್ದಾರೆ. ಬೇರೆಲ್ಲೂ ಮುಸ್ಲಿಮೇತರ ನಿರಾಶ್ರಿತರು ಇಲ್ಲವೇ? ಎಂದು ಪ್ರಶ್ನಿಸಿದರು.