ಮೈಸೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ 20 ವಿಶೇಷ ರೈಲುಗಳ ಸಂಚಾರಕ್ಕೆ ಸೂಚಿಸಲಾಗಿದೆ. ಮೈಸೂರು ವಿಭಾಗದಿಂದ ಎಂಟು ರೈಲುಗಳ ಸಂಚಾರ ಆರಂಭಿಸಲಾಗುತ್ತಿದೆ ಎಂದು ವಿಭಾಗೀಯ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ತಿಳಿಸಿದರು.
ಶುಕ್ರವಾರ ರೈಲ್ವೆ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ದೈನಂದಿನ ಕಾಯ್ದಿರಿಸದ ಟಿಕೇಟ್ ರೈಲುಗಳನ್ನು ಮೈಸೂರಿನಿಂದ ಅರಸೀಕೆರೆ, ತಾಳಗುಪ್ಪ ಮತ್ತು ಬೆಳಗಾವಿಗೆ ಸಂಚರಿಸಲು ನಿಯೋಜಿಸಲಾಗಿದ್ದು, ಟಿಕೆಟ್ನ್ನು ಕೌಂಟರ್‌ಗಳಲ್ಲಿ ನೀಡಲಾಗುತ್ತದೆ. ಕೊರೊನಾ ನಡುವೆಯೂ ನೈರುತ್ಯ ರೈಲ್ವೆ ಮೈಸೂರು ವಿಭಾಗಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇ.50-60 ರಷ್ಟು ಯಥಾಸ್ಥಿತಿಗೆ ಮರಳುತ್ತಿದೆ ಎಂದು ಹೇಳಿದರು.
ಈಗಾಗಲೇ ಮೈಸೂರು ವಿಭಾಗದಿಂದ 100 ಜೋಡಿ ರೈಲುಗಳು ಸಂಚರಿಸುತ್ತಿದ್ದು, ಅದರಲ್ಲಿ 32 ರೈಲುಗಳು ಅಂತಾರಾಜ್ಯಗಳು ಸೇರಿವೆ. ಇವು ಶೇ.65 ರಷ್ಟು ಪ್ರಯಾಣಿಕ ಸಾಮರ್ಥ್ಯದಲ್ಲಿ ಸಂಚಾರಿಸುತ್ತಿವೆ. ಪ್ರಯಾಣಿಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋವಿಡ್ ಪೂರ್ವದಲ್ಲಿ ಮೈಸೂರು ವಿಭಾಗದಲ್ಲಿ 170 ರೈಲುಗಳು ಓಡುತ್ತಿದ್ದವು. ಈಗ ನಿಯೋಜಿಸುತ್ತಿರುವ ವಿಶೇಷ ರೈಲು ಸೇರಿದಂತೆ 120 ರೈಲುಗಳು ಸಂಚರಿಸಲಿವೆ. ಒಟ್ಟಾರೆ ರೈಲು ಸಂಚಾರದಲ್ಲಿ ಶೇ.75 ರಷ್ಟು ಕೋವಿಡ್ ಪೂರ್ವದ ಯಥಾಸ್ಥಿತಿಯಲ್ಲಿ ತಲುಪುತ್ತಿವೆ. ವಿಶೇಷ ರೈಲುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿಸಿದರು.
ನಕಲಿ ವಿಡಿಯೋ ನಂಬದಿರಿ: ಕೋವಿಡ್ ನಡುವೆಯೂ ಪ್ರಯಾಣಿಕರು ರೈಲಿನಲ್ಲಿ ಕಿಕ್ಕಿರಿದು ತುಂಬಿದಂತೆ ಪ್ರಯಾಣಿಸುತ್ತಿದ್ದಾರೆ ಎಂದು ಬಿಂಬಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇವು ನಕಲಿಯಾಗಲಿವೆ. ಕೊರೊನಾ ನಂತರ ಆರಂಭವಾದ ರೈಲುಗಳಲ್ಲಿ ಜನ ಸಂದಣಿ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜತೆಗೆ ಕೋವಿಡ್ ಸೋಂಕು ತಡೆಗಟ್ಟುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ನಕಲಿ ವಿಡಿಯೋಗಳಿಂದ ಗೊಂದಲಕ್ಕೆ ಒಳಗಾಗಬಾರದು ಎಂದು ಪ್ರಯಾಣಿಕರಿಗೆ ಮನವಿ ಮಾಡಿದರು.
ಓದಿ : ಭಾರತದ ಅನುಮತಿಯಿಲ್ಲದೇ ಲಕ್ಷದ್ವೀಪ ಕಡಲಲ್ಲಿ ಸಂಚರಿಸಿದ ಅಮೆರಿಕದ ಯುದ್ಧ ನೌಕೆ!
ನಾಗನಹಳ್ಳಿ ಟರ್ಮಿನಲ್ ಸಂಬಂಧಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಆರ್‌ಎಂ ರಾಹುಲ್ ಅಗರ್‌ವಾಲ್, ಇನ್ನೂ ಭೂ ಸ್ವಾಧೀನ ಪ್ರತಿಕ್ರಿಯೆ ಆರಂಭವಾಗದ ಕಾರಣ ತಡವಾಗಿದೆ ಎಂದರು.
ಪ್ಲಾಸ್ಟಿಕ್ ವಿರುದ್ಧ ಜಾಗೃತಿ: ರೈಲು ನಿಲ್ದಾಣಗಳಲ್ಲಿ ಮತ್ತು ರೈಲುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಮೈಸೂರು ವಿಭಾಗವು ಜಾರಿಗೊಳಿಸಿದ್ದು, ವಿಭಾಗದ ಮೈಸೂರು, ದಾವಣಗೆರೆ, ಹಾಸನ, ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮುಂತಾದ ನಿಲ್ದಾಣಗಳಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬುಲೆಟ್ ಟ್ರೈನ್ ಸಮೀಕ್ಷೆ : ಚೆನ್ನೈ-ಮೈಸೂರು ಬುಲೆಟ್ ರೈಲು ಕುರಿತು ಪ್ರತಿಕ್ರಿಯಿಸಿ, ಇದು ವಿಭಾಗೀಯ ಕಚೇರಿ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ಮಂಡಳಿಯಿಂದ ಕೆಲಸ ನಡೆಯುತ್ತಿದೆ. ಈಗಾಗಲೇ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.
ಮೈಸೂರು ವಿಭಾಗವು ಬೆಂಗಳೂರಿನಿಂದ ಹುಬ್ಬಳ್ಳಿಯ ಮುಖ್ಯ ಮಾರ್ಗದಲ್ಲಿರುವ ತೋಳಹುಣಸೆ-ದೇವರಗುಡ್ಡ ಭಾಗದ (40.27 ಕಿ.ಮೀ. ) ಹಳಿ ದ್ವಿಪಥ ಕಾರ್ಯ ಮುಗಿಸಿದೆ. ಇದರೊಂದಿಗೆ ಬಾಣಸಂದ್ರದಿಂದ ದೇವರಗುಡ್ಡದವರೆಗಿನ ಹಳಿಯು ಪೂರ್ಣವಾಗಿ ದ್ವಿಪಥವಾಗಿದೆ ಎಂದು ವಿಭಾಗೀಯ ವ್ಯವಸ್ಥಾಪಕರು ಮಾಹಿತಿ ನೀಡಿದರು.