ಮೈಸೂರು : ಜಿಲ್ಲೆಯಲ್ಲಿ 16 ನಾಮಪತ್ರ ಸಲ್ಲಿಕೆಯಾಗಿದೆ. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಮೊದಲ ದಿನವೇ ನಾಮಪತ್ರ ಸಲ್ಲಿಸಿದ್ದು, ತಮ್ಮ ಒಟ್ಟು ಆಸ್ತಿ ಮೌಲ್ಯ 11 ಕೋಟಿ ರೂ ತೋರಿಸಿದ್ದಾರೆ. ಈ ಪೈಕಿ 1.12 ಕೋಟಿ ರೂ ಚರಾಸ್ತಿ ಹಾಗೂ 10.64 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನೂ ನಮೂದಿಸಿದ್ದಾರೆ. ತಮ್ಮ ಬಳಿ 5.41 ಲಕ್ಷ ರೂ, ಅವರ ಪತ್ನಿಯ ಬಳಿ 3.75 ಲಕ್ಷ ರೂ, ಮಗ ನಿತಿನ್ ಬಳಿ 1.23 ಲಕ್ಷ ರೂ ನಗದು ಹಾಗು ವಿವಿಧ ಬ್ಯಾಂಕ್ ಗಳಲ್ಲಿ 87 ಲಕ್ಷ ರೂ, ವಿಜಯ ಬ್ಯಾಂಕ್‌ಲ್ಲಿ 50 ಸಾವಿರ ರೂ ಷೇರು ಹೊಂದಿದ್ದಾರೆ. ಟೊಯೋಟಾ ಇನ್ನೊವಾ ಕಾರು (12 ಲಕ್ಷ ರೂ), ಟ್ರಾಕ್ಟರ್ ಮತ್ತು ಟ್ರೇಲರ್ ಹಾಗೂ ಮಿನಿ ಟ್ರಾಕ್ಟರ್ (8.25 ಲಕ್ಷ ರೂ), ಪತ್ನಿ ಹೆಸರಿನಲ್ಲಿ ಹೋಂಡಾ ಅಮೇಜ್ ಕಾರು, ಪುತ್ರನ ಹೆಸರಲ್ಲಿ ಎಕ್ಸ್ ಯುವಿ-300, ಮಹೀಂದ್ರಾ ತಾರ್ ಕಾರುಗಳಿವೆ. ಕುಟುಂಬದವರ ಬಳಿ 54 ಲಕ್ಷ ರೂ ಮೌಲ್ಯದ ಚಿನ್ನಾಭರಣವಿದೆ. ಮರದೂರು, ಕಿತ್ತೂರು, ಅತ್ತಿಗೋಡು, ತಡೂರಿನಲ್ಲಿ ಕೃಷಿ ಭೂಮಿ ಇದೆ. ಮೈಸೂರಿನ ವಿವಿಧೆಡೆ ನಿವೇಶನಗಳು, ಮೈಸೂರು, ಚುಂಚನಕಟ್ಟೆಯಲ್ಲಿ ವಾಣಿಜ್ಯ ಕಟ್ಟಡಗಳಿವೆ. ವ್ಯವಸಾಯ ಮತ್ತು ವಾಣಿಜ್ಯೋದ್ಯಮ ತಮ್ಮ ಆದಾಯದ ಮೂಲ ಎಂದು ಕೆ.ವೆಂಕಟೇಶ್ ತಿಳಿಸಿದ್ದಾರೆ. ಬ್ಯಾಂಕ್ ಹಾಗೂ ಖಾಸಗಿ ವ್ಯಕ್ತಿಗಳಿಂದ 6.42 ಕೋಟಿ ರೂ ಸಾಲ ಪಡೆದಿರುವುದಾಗಿ ಹೇಳಿದ್ದಾರೆ. ಬಿಎಸ್ಸಿ ಪದವಿಧರರಾದ ವೆಂಕಟೇಶ್, ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : 16 ಕೆಜಿ ಚಿನ್ನ, ₹152 ಕೋಟಿ ಆಸ್ತಿಯ ಎಸ್.ಎಸ್.ಮಲ್ಲಿಕಾರ್ಜುನ್