ಮೈಸೂರು: ವಿದೇಶದಿಂದ ಮೈಸೂರಿಗೆ ಬಂದಿದ್ದ ಇಬ್ಬರು ವ್ಯಕ್ತಿಗಳ ಕೊರೊನಾ ಸೋಂಕು ಚಿಕಿತ್ಸೆ ಮುಗಿಯುತ್ತ ಬಂದಿದ್ದು, ಮತ್ತೆ ಅವರನ್ನು ಪರೀಕ್ಷೆ ಮಾಡುತ್ತೇವೆ. ಅದರಲ್ಲಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ಮೈಸೂರಿಗೆ ಆಗಮಿಸಿದ 10 ಜನರಲ್ಲಿ 5 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಇನ್ನು ಜುಬಿಲಿಯಂಟ್‌ನ 19 ಮಂದಿ, ವಿದೇಶದಿಂದ ಇಬ್ಬರು, ದೆಹಲಿ ಸಮಾವೇಶದಿಂದ ಬಂದ ಐವರು ಸೇರಿ 28 ಮಂದಿ ಕೊರೊನಾ ಸೋಂಕಿತರಾಗಿದ್ದಾರೆ. ಮೈಸೂರಿನಲ್ಲಿ 1626 ಮಂದಿಯನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. 1179 ಜನ ಹೋಂ ಕ್ವಾರೆಂಟೈನ್ ಪೂರ್ಣಗೊಳಿಸಿದ್ದಾರೆ ಎಂದರು.
ಕೊರೊನಾ ಸೋಂಕು ಪರೀಕ್ಷೆಗಾಗಿ ಸರ್ಕಾರ 100 ಕಿಟ್‌ಗಳನ್ನು ಕಳುಹಿಸಿದ್ದಲ್ಲದೇ ಸಿಎಫ್‌ಟಿಆರ್‌ಐನಲ್ಲಿ ತರಬೇತಿ ಪಡೆಯುತ್ತಿರುವ ತಂಡವು ಎರಡು ಕಿಟ್ನ್ನು ಭಾನುವಾರ ಜಿಲ್ಲಾಡಳಿತಕ್ಕೆ ಹಸ್ತಾಂತರ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ನಂತರ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಮಾತನಾಡಿ, ಭಾನುವಾರ ಸಂಜೆ 6ರಿಂದ ಲಾಕ್‌ಡೌನ್ ಮುಗಿಯವರೆಗೆ ಮೆಡಿಕಲ್, ಹೋಂ ಡೆಲಿವರಿ ಹೊರತು ಪಡಿಸಿ, ದಿನಸಿ, ತರಕಾರಿ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕು ಬೆಳಿಗ್ಗೆ ಮಾತ್ರ ದಿನಸಿ ಅಂಗಡಿ, ತರಕಾರಿ ಅಂಗಡಿ ತೆರೆಯಲು ಅವಕಾಶವಿದೆ ಎಂದರು. ಇನ್ನು ಕಾನೂನನ್ನು ಉಲ್ಲಂಘಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.