ಮೈಸೂರು: ಶತಮಾನ ಪೂರೈಸಿರುವ ದೇವರಾಜ ಮಾರುಕಟ್ಟೆಯಲ್ಲಿ ಬದುಕು ಕಟ್ಟಿಕೊಂಡಿರುವ ಹಾಗೂ ಬದುಕು ಕಟ್ಟಿಕೊಳ್ಳುತ್ತಿರುವ ವ್ಯಾಪಾರಿಗಳಿಗೆ, ಮಹಾನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿ ಖಾಲಿ ಮಾಡುವಂತೆ ಸೂಚನೆ ನೀಡಿದ್ದಾರೆ.
ಇದರಿಂದ ದೇವರಾಜ ಮಾರುಕಟ್ಟೆಯ ಸಯ್ಯಾಜಿರಾವ್ ರಸ್ತೆಗೆ ಹೊಂದಿಕೊಂಡಂತಿರುವ ಭಾಗದಲ್ಲಿ ವ್ಯಾಪಾರ ಮಾಡುತ್ತಿರುವ 50ಕ್ಕೂ ಹೆಚ್ಚು ವ್ಯಾಪಾರಿಗಳು ಹಾಗೂ ರಸ್ತೆ ಬದಿಯ ವ್ಯಾಪಾರಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ. ಪರ್ಯಾಯ ವ್ಯವಸ್ಥೆ ನಿರ್ಮಾಣ ಮಾಡದೆ 50ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ನಗರ ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿರುವುದರಿಂದ ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ.
ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣೆಯ ಮುಖ್ಯ ಕಚೇರಿಯ ಕಮಾನು ಮಳೆಯಿಂದ ಕುಸಿದ ಬಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತ ನಗರ ಪಾಲಿಕೆ ಅಧಿಕಾರಿಗಳು, ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆಯಲ್ಲಿ ಮಳೆಯಿಂದ ಅನಾಹುತವಾದರೆ ಯಾರು ಹೊಣೆಯಾಗುತ್ತಾರೆ ಎಂಬ ಆಲೋಚನೆಯಿಂದ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಗೌರಿಗಣೇಶ, ಆಯುಧ ಪೂಜೆ, ದಸರಾ ಹೀಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಪರ್ಯಾಯ ವ್ಯವಸ್ಥೆ ಮಾಡದೇ ಖಾಲಿ ಮಾಡುವಂತೆ ನೋಟಿಸ್ ನೀಡಿರುವುದರಿಂದ ವ್ಯಾಪಾರಿಗಳು ಮುಂದಿನ ಭವಿಷ್ಯದಿಂದ ಕುರಿತು ಆತಂಕಗೊಂಡಿದ್ದಾರೆ. ಈ ಸಂಬಂಧ ಈಟಿವಿ ಭಾರತ್ನೊಂದಿಗೆ ಮಾತನಾಡಿದ ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪೈ.ಮಹದೇವ್, ದೇವರಾಜ ಮಾರುಕಟ್ಟೆಯ 50ಕ್ಕೂ ಹೆಚ್ಚು ವ್ಯಾಪಾರಿಗಳಿಗೆ ಖಾಲಿ ಮಾಡುವಂತೆ ಮಹಾನಗರ ಪಾಲಿಕೆ ನೋಟಿಸ್ ನೀಡಿದೆ. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದರು.