ಮೈಸೂರು: ಆನೆಯ ಪಕ್ಕದಲ್ಲಿ ಪಟಾಕಿಯನ್ನು ಸಿಡಿಸಿದ್ದೇ ಶ್ರೀರಂಗಪಟ್ಟಣ ದಸರಾ ಸಂದರ್ಭದಲ್ಲಿ ನಡೆದ ಘಟನೆಗೆ ಕಾರಣ ಎಂದು ಡಿಸಿಎಫ್ ಕರಿಕಾಳನ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಈಟಿವಿ ಭಾರತದ ಜೊತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಜಂಬೂಸವಾರಿಯ ದಿನ ಆನೆಯ ಪಕ್ಕದಲ್ಲಿ ಕೆಲವರು ಪಟಾಕಿ ಹಾಗೂ ಸ್ಪಾರ್ಕಲ್ಸ್ಗಳನ್ನು ಹೊತ್ತಿಸಿದ್ದಾರೆ.
ಇದರ ವಾಸನೆ ಆನೆಗಳಿಗೆ ರೂಢಿ ಇಲ್ಲ. ಇದೇ ಸಮಯದಲ್ಲಿ ಪಟಾಕಿಯಿಂದ ಸಿಡಿದ ಬಣ್ಣದ ಕಾಗದದ ಚೂರುಗಳು ಕಣ್ಣಿಗೆ ತಾಗುವುದನ್ನು ತಪ್ಪಿಸಿಕೊಳ್ಳಲು ಗೋಪಾಲಸ್ವಾಮಿ ಆನೆ ತಿರುಗಿದೆ ಎನ್ನುವುದು ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಗೋಪಾಲಸ್ವಾಮಿ ಆನೆಯ ಹತ್ತಿರ ನೂರಾರು ಜನರು ಗುಂಪು ಗೂಡಿರುವುದಲ್ಲದೇ ಸೆಲ್ಫಿಗಾಗಿ ಹಾಗೂ ಮುಟ್ಟಲು ಆನೆಯ ಹತ್ತಿರವೇ ಸೇರುತ್ತಿದ್ದರು. ಆನೆಗಳ ಕಣ್ಣು ಸೂಕ್ಷ್ಮ ಭಾಗವಾಗಿದ್ದು, ಪಟಾಕಿಯ ಕಾಗದಗಳು ಕಣ್ಣಿಗೆ ತಾಗದಂತೆ ಎಚ್ಚರವಹಿಸಿದೆ ಅಷ್ಟೇ. ಯಾರಿಗೂ ತೊಂದರೆಯಾಗದಂತೆ ನೋಡಿಕೊಂಡಿದೆ. ಮೈಸೂರಿನಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
ಜಂಬೂಸವಾರಿಯ ಮಾರ್ಗವನ್ನು ಝೀರೋ ಜೋನ್:
ಶ್ರೀರಂಗಪಟ್ಟಣ ಜಂಬೂಸವಾರಿ ಪ್ರಕರಣ ಕುರಿತು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಚರ್ಚೆ ನಡೆಸಿ, ಮೈಸೂರು ಜಂಬೂಸವಾರಿ ದಿನ ಕೆಲವೊಂದು ಕಟ್ಟುಪಾಡುಗಳನ್ನು ಅನುಸರಿಸಲು ತೀರ್ಮಾನಿಸಿದ್ದಾರೆ. ಅಂಬಾರಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ಜಂಬೂಸವಾರಿಯ ಮಾರ್ಗವನ್ನು ಝೀರೋ ಜೋನ್ ಆಗಿ ಪರಿವರ್ತಿಸಲಾಗುವುದು. ಈ ಮಾರ್ಗದಲ್ಲಿ ಆನೆ ಮಾವುತರು, ಕಾವಾಡಿಗಳು, ವೈದ್ಯರು ಹಾಗೂ ಸಂಬಂಧಿಸಿದವರನ್ನು ಹೊರತುಪಡಿಸಿ ಯಾರೂ ಇರುವಂತಿಲ್ಲ ಎಂಬ ನಿಯಮ ಜಾರಿಗೊಳಿಸಲು ಚಿಂತನೆ ಮಾಡಿದ್ದಾರೆ.