ಮೈಸೂರು : ವಿಶ್ವವಿಖ್ಯಾತ ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ನಡೆಸಲಾಗುತ್ತಿದೆ. ಆನೆಗಳಿಗೆ ವಿಶೇಷ ಆಹಾರ ನೀಡುವ ಜೊತೆಗೆ ಭಾರ ಹೊರುವ ತಾಲೀಮು ನಡೆಯುತ್ತಿದೆ. ಈ ಬಗ್ಗೆ ಡಿಸಿಎಫ್ ಸೌರವ್ ಕುಮಾರ್ ಅವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
ದಸರಾ ಜಂಬೂಸವಾರಿಗೆ ಗಜಪಡೆ ತಾಲೀಮು ಸೇರಿದಂತೆ ಎಲ್ಲಾ ರೀತಿಯಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ 5 ಆನೆಗಳಿಗೆ ಭಾರ ಹಾಕಿ ತಾಲೀಮು ನಡೆಸಿದ್ದು, ಈ ವೇಳೆ ಬರುವ ಎಲ್ಲಾ ಫೀಡ್ಬ್ಯಾಕ್ಗಳನ್ನು ಆಧರಿಸಿ ಬದಲಾವಣೆ ಮಾಡುತ್ತಿದ್ದೇವೆ. ಇವತ್ತು ಎರಡನೇ ತಂಡ ಆಗಮಿಸಿರುವುದರಿಂದ ನಮ್ಮ ಗಜಪಡೆ ತಂಡ ಸರಿಯಾಗಿದೆ. ತಂಡದಲ್ಲಿ 10 ಹಳೆ ಆನೆಗಳಿದ್ದು, 4 ಹೊಸ ಆನೆಗಳಿನ್ನು ಸೇರಿಸಲಾಗಿದೆ. ಹೊಸ ಆನೆಗಳಿಗೆ ಮೊದಲು ಆರಮನೆ ಆವರಣದಲ್ಲಿ 2 ರೌಂಡ್ ತಾಲೀಮು ನಡೆಸುತ್ತೇವೆ. ಈ ಸಂದರ್ಭದಲ್ಲಿ ಆನೆಗಳ ವರ್ತನೆಯನ್ನು ನೋಡಿ ಹಳೆ ಆನೆಗಳ ಮಧ್ಯೆ ಸೇರಿಸಿ ದೈನಂದಿನ ರೌಂಡ್ಸ್ಗೆ ಕರೆದುಕೊಂಡು ಹೋಗುತ್ತೇವೆ ಎಂದರು.
ಆನೆಗಳ ವರ್ತನೆ ಮೇಲೆ ನಮ್ಮ ಕಾವಾಡಿಗಳ ಹಿಡಿತವಿದೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ. ಜಂಬೂಸವಾರಿಯಲ್ಲಿ ಭಾಗವಹಿಸುವ ಕುದುರೆಗಳ ಜೊತೆಗೂ ಸಹ ಗಜಪಡೆ ತಾಲೀಮು ನಡೆಸುತ್ತೇವೆ. ಆನೆಗಳು ರೌಂಡ್ಸ್ ಹೋಗುವಾಗ ಸೌಂಡ್ಸ್ಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳ ಬಗ್ಗೆ ಎಚ್ಚರ ವಹಿಸಿದ್ದೇವೆ. ಪ್ರತಿ ವರ್ಷದಂತೆ ದಸರಾ ಹತ್ತಿರವಾಗುತ್ತಿದ್ದಂತೆ 14 ಆನೆಗಳ ಪೈಕಿ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾವುದು? ಅರಮನೆಯ ರಾಜ ವಂಶಸ್ಥರು ಆಚರಿಸುವ ಶರನ್ನವರಾತ್ರಿ ಆಚರಣೆಗೆ ಪಟ್ಟದ ಆನೆಯಾಗಿ ಯಾವುದನ್ನು ಮಹಾರಾಣಿಯವರು ಆಯ್ಕೆ ಮಾಡುತ್ತಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತದೆ. ಈ ಬಗ್ಗೆ ಟೀಮ್ ಆದ ನಂತರ ಮಾಹಿತಿ ನೀಡುತ್ತೇನೆ ಎಂದು ಡಿಸಿಎಫ್ ಸೌರವ್ ಕುಮಾರ್ ತಿಳಿಸಿದರು.
ಗಜಪಡೆಗೆ ನೀಡುವ ಆಹಾರದ ಮೆನು : ತಾಲೀಮಿನಲ್ಲಿ ಭಾಗವಹಿಸಿ ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಆನೆ ಶಿಬಿರಗಳಿಗೆ ಆಗಮಿಸಿರುವ ಗಜಪಡೆಗೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಮುದ್ದೆ, ಗ್ರೀನ್ ಗ್ರಾಂ, ಬ್ಲಾಕ್ ಗ್ರಾಂ, ವೀಟ್, ಬಾಯ್ಲ್ಡ್ ರೈಸ್ ಜೊತೆಗೆ ವೆಜಿಟೇಬಲ್ ಸೇರಿಸಿ ಆಹಾರ ನೀಡುತ್ತಿದ್ದೇವೆ. ಭತ್ತದ ಹುಲ್ಲಿನ ಜೊತೆಗೆ ಬೆಲ್ಲ, ಸಕ್ಕರೆ ಸೇರಿದಂತೆ ಎಲ್ಲ ರೀತಿಯ ವಿಟಮಿನ್ ಇರುವ ಆಹಾರವನ್ನು ಗಜಪಡೆಗೆ ನೀಡಲಾಗುವುದು. ಆನೆಗಳ ಅರೋಗ್ಯ ತಪಾಸಣೆ ಪ್ರತಿನಿತ್ಯ ನಡೆಯುತ್ತಿದೆ. ಒಟ್ಟಾರೆ 14 ಗಜಪಡೆ ಅದರ ಜೊತೆಗೆ ಬಂದ ಕಾವಾಡಿ, ಮಾವುತರ ಅರೋಗ್ಯ ಸೇರಿದಂತೆ ಎಲ್ಲವೂ ಚೆನ್ನಾಗಿದ್ದು, ಜಂಬೂಸವಾರಿಗೆ ಭರದಿಂದ ಸಿದ್ಧತೆ ಸಾಗಿದೆ ಎಂದು ಡಿಸಿಎಫ್ ವಿವರಿಸಿದರು.
ಪ್ರಪಂಚದಲ್ಲೇ ಗಜಪಡೆಯನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡು ಅಚರಿಸುವ ಏಕೈಕ ಹಬ್ಬ ಎಂದರೆ ಅದು ಮೈಸೂರು ದಸರಾ. ಅಂದು ಮೈಸೂರನ್ನು ಆಳಿದ ಒಡೆಯ ರಾಜ ಮನೆತನ ಶರನ್ನವರಾತ್ರಿ ಸಂದರ್ಭದಲ್ಲಿ ಜಂಬೂಸವಾರಿ ಮೆರವಣಿಗೆಯನ್ನು ಗಜಪಡೆಯ ಮೂಲಕ ಆಚರಿಸುತ್ತಿದರು. 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ನಗರ ಪ್ರಮುಖ ರಸ್ತೆಯಲ್ಲಿ ಗಜಪಡೆ ಸಾಗುತ್ತದೆ. ಅದೇ ಸಂಪ್ರದಾಯ ಈಗಲೂ ಮುಂದುವರೆದಿದ್ದು, ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಗಜಪಡೆಯನ್ನು ಅರಮನೆಗೆ ಕರೆತಂದು ಇಲ್ಲಿ ಗಜಪಡೆಗೆ ವಿಶೇಷ ಆಹಾರ ನೀಡಿ ತಾಲೀಮು ನಡೆಸುತ್ತಿದ್ದಾರೆ.
ಆನೆಗಳ ತೂಕ ಪರೀಕ್ಷೆ: ಈಗಾಗಲೇ ದಸರಾದಲ್ಲಿ ಪಾಲ್ಗೊಳ್ಳುವ ಒಟ್ಟು 14 ಆನೆಗಳ ತೂಕ ಪರೀಕ್ಷೆ ಮಾಡಲಾಗಿದೆ. ಜಂಬೂ ಸವಾರಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು (5,300 ಕೆ.ಜಿ) 21 ದಿನಗಳಲ್ಲಿ 140 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಸೆಪ್ಟೆಂಬರ್ 6 ರಂದು ಅಭಿಮನ್ಯು ತೂಕ 5,160 ಕೆಜಿ ಇತ್ತು. ಮಾಜಿ ಕ್ಯಾಪ್ಟನ್ ಅರ್ಜುನ ಆನೆ 5,680 ಕೆಜಿ ತೂಕ ಹೊಂದಿದ್ದು, ಅತ್ಯಂತ ಬಲಶಾಲಿ ಹಾಗೂ ಹೆಚ್ಚು ತೂಕದ ಆನೆ ಎಂಬ ಹೆಗ್ಗಳಿಕೆ ಉಳಿಸಿಕೊಂಡಿದೆ.
ಇದನ್ನೂ ಓದಿ : ದಸರಾ ಮಹೋತ್ಸವದಲ್ಲಿ ಭಾಗವಹಿಸುವ 14 ಆನೆಗಳ ತೂಕ ಪರೀಕ್ಷೆ.. ನಾಳೆಯಿಂದ ಆನೆಗಳ ತಾಲೀಮು ಶುರು