ಮೈಸೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿದೆ ಎಂದು ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್‌ಲೈನ್ಸ್ ಹೊರಡಿಸಿದೆ. ಅದರ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೇ ಕಾರಣಕ್ಕೆ ನಾವು ಎಲ್ಲ ಜಾತ್ರೆ, ಉತ್ಸವಗಳನ್ನ ರದ್ದು ಮಾಡಿದ್ದೇವೆ. ಜನರು ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗೋಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗೆ ಕಷ್ಟ ಆಗುತ್ತೆ. ಜಾತ್ರೆಯನ್ನ ಮುಂದಿನ ವರ್ಷ ಮಾಡಬಹುದು. ಆದರೆ ಜೀವನ ಉಳಿಸಿಕೊಳ್ಳುವುದು ಮುಖ್ಯ ಆಗಿದೆ ಎಂದರು.
ಇದನ್ನೂ ಓದಿ: ರೈತರ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರ ಮೇಲೆ ಜೇನು ದಾಳಿ
ಮೈಸೂರು ಅರಮನೆಯಲ್ಲಿ ಮತ್ತೆ RTPCR ಹಾಗೂ ಆ್ಯಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಬಾವಲಿ ಗಡಿಯಲ್ಲಿ ಪ್ರತಿಯೊಬ್ಬರಿಗೂ RTPCR ಟೆಸ್ಟ್ ಕಡ್ಡಾಯವಾಗಿದೆ. ತರಕಾರಿ ವಾಹನ ಅಲ್ಲ, ಯಾವ ವಾಹನಕ್ಕೂ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ನಾವು ಮತ್ತೆ ಶಾಲೆ, ಕಾಲೇಜುಗಳಲ್ಲಿ ರ್‍ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಿಂದ ಸೋಂಕು ಹರಡುತ್ತಿದೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಸೋಂಕು ಹೆಚ್ಚಿದಲ್ಲಿ ಮಿನಿ ಲಾಕ್‌ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಅವರು ವಿವರಿಸಿದರು.