ಮೈಸೂರು: ಕೊರೋನಾ ವೈರಸ್ ಬಗ್ಗೆ ಮೈಸೂರಿನ ಜನರು ಆತಂಕಪಡುವ ಪ್ರಮೇಯವಿಲ್ಲವೆಂದು, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರಿಗೆ ಬರುವ ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಕೊರೋನಾ ವೈರಸ್ ಪತ್ತೆಗೆ ಕೆ.ಆರ್. ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ ಎಂದರು.
ಹೋಟೆಲ್ ಉದ್ಯಮ ಹಾಗೂ ಟ್ರಾವೆಲ್ ಏಜೆನ್ಸಿಯ ಮೂಲಕ, ಕೊರೋನಾ ವೈರಸ್ ಬಾಧಿತರ ಪತ್ತೆಗೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಒಂದೂವರೆ ತಿಂಗಳಿಂದ ಚೀನಾ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದ್ದು, ಸದ್ಯ ಮೈಸೂರಿನಲ್ಲಿ ಯಾವುದೇ ಆತಂಕವಿಲ್ಲ ಎಂದರು.
ಕೇರಳ ರಾಜ್ಯದಿಂದ ಕೊರೋನಾ ವೈರಸ್ ಬಾಧಿತರು ಬಂದಿಲ್ಲ. ಇದರ ಬಗ್ಗೆ ಆತಂಕ ಬೇಡ, ಆದರೂ ಮುಂಜಾಗ್ರತೆ ಇರಲಿ ಎಂದರು. ಸಾಮಾನ್ಯ ವೈರಲ್ ಜ್ವರಕ್ಕೂ ಮೊದಲು ಚಿಕಿತ್ಸೆ ಪಡೆಯಿರಿ. ಇದಕ್ಕಾಗಿ ಕೆ.ಆರ್. ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ತೆರೆಯಲಾಗಿದೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಜಿಲ್ಲಾಡಳಿತದ ಸೂಚನೆ ಮೇರೆಗೆ ಎಚ್ಚರಿಕೆ ವಹಿಸಲಾಗಿದೆ ಎಂದರು.