ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಎರಡನೇ ತಂಡದ ಆನೆಗಳಿಗೆ ಇಂದು ತೂಕ ಹಾಕುವ ಪ್ರಕ್ರಿಯೆ ನಡೆಯಿತು. ಇದರ ಜೊತೆಗೆ ಮೊದಲ ತಂಡದಲ್ಲಿ ಆಗಮಿಸಿದ 13 ಆನೆಗಳಿಗೂ ಸಹ ತೂಕ ಹಾಕಲಾಗಿದೆ.
ದಸರಾ ಗಜಪಡೆಗಳ ತೂಕ ಪ್ರಕ್ರಿಯೆಯು ಮೈಸೂರಿನ ಧನ್ವಂತ್ರಿಯಲ್ಲಿರುವ ವೇ ಬ್ರಿಡ್ಜ್ನಲ್ಲಿ ನಡೆಯಿತು. ಬರೋಬ್ಬರಿ 5,885 ಕೆಜಿ ತೂಕ ಹೊಂದಿರುವ ಮಾಜಿ ಕ್ಯಾಪ್ಟನ್ ಅರ್ಜುನ ಈ ಬಾರಿಯೂ ತಾನೇ ಬಲಶಾಲಿ ಎಂದು ನಿರೂಪಿಸಿದ್ದಾನೆ.
ಕ್ಯಾಪ್ಟನ್ ಅಭಿಮನ್ಯು 5000, ಚೈತ್ರ 3235, ಭೀಮಾ 4345, ಗೋಪಾಲಸ್ವಾಮಿ 5460, ಮಹೇಂದ್ರ 4450, ವಿಜಯ 2760, ಗೋಪಿ 4670, ಧನಂಜಯ 4890, ಶ್ರೀರಾಮ 4475, ಲಕ್ಷ್ಮೀ 3150, ಸುಗ್ರೀವ 4785, ಕಾವೇರಿ 3245 ಹಾಗು ಗಜಪಡೆಯಲ್ಲಿ ಕಿರಿಯನಾಗಿರುವ ಪಾರ್ಥಸಾರಥಿ 3445 ಕೆಜಿ ತೂಕ ಹೊಂದಿದ್ದಾರೆ.
ಆನೆಗಳ ತೂಕ ಪ್ರಕ್ರಿಯೆಯ ನಂತರ ಡಿಸಿಎಫ್ ಕರಿಕಾಳನ್ ಮಾತನಾಡಿ, "ಈ ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಮೊದಲು ಮತ್ತು ಎರಡನೇ ತಂಡದ ಆನೆಗಳು ಸೇರಿ 14 ಆನೆಗಳನ್ನು ನಾವು ತೂಕ ಮಾಡಿದ್ದೇವೆ. ಎರಡನೇ ತಂಡದ ಎಲ್ಲ ಗಂಡಾನೆಗಳೂ 4000 ದಿಂದ 4600 ಸಾವಿರ ಕೆಜಿ ವರೆಗೂ ಇದ್ದು, ಕಿರಿಯ ವಯಸ್ಸಿನ ಆನೆಯಾಗಿರುವ ಪಾರ್ಥಸಾರಥಿ ಆನೆ 3445 ತೂಕ ಹೊಂದಿದೆ.
ಮೊದಲನೇ ತಂಡದ ಎಲ್ಲ ಆನೆಗಳ ತೂಕದಲ್ಲಿ ಹೆಚ್ಚಾಗಿದ್ದು, ನಮ್ಮ ತಾಲೀಮುಗಳಿಗೂ ಕೂಡಾ ಚೆನ್ನಾಗಿ ಸಹಕರಿಸುತ್ತಿವೆ. ಈ ದಿನ ಮೊದಲನೇ ಬಾರಿಗೆ ಎಲ್ಲ 14 ಆನೆಗಳನ್ನು ತೂಕ ಮಾಡುವ ಸಲುವಾಗಿ ಅರಮನೆಯಿಂದ ಹೊರ ಕರೆತರಲಾಗಿತ್ತು. ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಮೊದಲನೇ ತಂಡದ ಆನೆಗಳ ಜೊತೆ ಸೇರಿ ನಿನ್ನೆಯಿಂದಲೇ ತಾಲೀಮಿನಲ್ಲಿ ಭಾಗವಹಿಸಿವೆ. ಸೆ.12 ರಿಂದ ಎಲ್ಲ ಆನೆಗಳು ತಾಲೀಮಿನಲ್ಲಿ ಭಾಗವಹಿಸಲಿವೆ" ಎಂದು ತಿಳಿಸಿದರು.
ಇದನ್ನೂ ಓದಿ: ಕುಂಬಳಕಾಯಿ ಕಳ್ಳರು ಎಲ್ಲಾ ಕಡೆ ಇದ್ರೆ ನಾನೇನು ಮಾಡಲಿ?: ಸಂಸದೆ ಸುಮಲತಾ