ಮೈಸೂರು: ಆನ್ಲೈನ್ ವಂಚನೆಯ ಸೈಬರ ಕಳ್ಳರ ಜಾಲಕ್ಕೆ ಸಿಲುಕಿ ಹಾಲಿ ಎಂಲ್ಎಸಿ ಎಚ್ ವಿಶ್ವನಾಥ ಪುತ್ರ ಅಮಿತ್ ದೇವರಹಟ್ಟಿ ಅವರು ಬರೋಬ್ಬರಿ 1.99 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ. ಬಳಿಕ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪ್ರಕರಣ ಹಿನ್ನೆಲೆ? ಜು.28ರಂದು ಬೆಳಗ್ಗೆ ಅವರು ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಖಾಸಗಿ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಎಟಿಎಂನಲ್ಲಿ ಹಣ ಬಾರದ ಹಿನ್ನೆಲೆ ಅದರ ಬಗ್ಗೆ ತಿಳಿಯಲು ಅವರು ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಅಲ್ಲಿ ಕಸ್ಟಮರ್ ಕೇರ್ ನಂಬರ್ ಒಂದು ದೊರೆತಿದೆ. ಆ ನಂಬರ್ ಗೆ ಅಮಿತ್ ಕರೆ ಮಾಡಿದ್ದಾರೆ.
ಆಗ ವ್ಯಕ್ತಿಯೊಬ್ಬ ಮಾತನಾಡಿ ಅವರ ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರ ಪಡೆದುಕೊಂಡಿದ್ದಾರೆ. ಸ್ವಲ್ಪ ಸಮಯದ ನಂತರ ಇವರ ಮೊಬೈಲ್‌ಗೆ ಒಟಿಪಿ ಸಹ ಬಂದಿದೆ. ಆ ಒಟಿಪಿಯನ್ನು ಅವರು ಶೇರ್ ಮಾಡದಿದ್ದರೂ ಕೂಡ ಅವರ ಬ್ಯಾಂಕ್ ಖಾತೆಯಿಂದ 1,99,989 ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ ಎಂದು ಅಮಿತ್ ದೇವರಹಟ್ಟಿ ದೂರು ನೀಡಿದ್ದಾರೆ.
ಪ್ರತ್ಯೇಕ ಪ್ರಕರಣ- ಹಣದ ಆಮಿಷವೊಡ್ಡಿ ವ್ಯಕ್ತಿಗೆ 17.52 ಲಕ್ಷ ವಂಚನೆ.. ನಗರದ ಉದಯಗಿರಿ ನಿವಾಸಿ ಸರ್ಫರಾಜ್(42) ಎಂಬುವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿದ್ದಾನೆ. ನಂತರ ಮಾಹಿತಿಗೆ ಮೋಹಿತ್ ಹಾಗೂ ಫಾತಿಮಾ ಎಂಬುವರನ್ನು ಸಂಪರ್ಕಿಸುವಂತೆ ತಿಳಿಸಿ ಟೆಲಿಗ್ರಾಂ ಖಾತೆಯ ಲಿಂಕ್ ಕಳುಹಿಸಿದ್ದಾನೆ. ಮೊದಲು ಕೆಲ ಪ್ರಾಜೆಕ್ಟ್‌ಗಳಿಗೆ ಹಣ ನೀಡಿದ್ದು, ನಂತರ ಬೋನಸ್ ನೀಡುವುದಾಗಿ ನಂಬಿಸಿ ಸುಮಾರು 17,52,732 ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮತ್ತೊಂದು ಕೇಸ್ನಲ್ಲಿ ಕುವೆಂಪು ನಗರದ ಚೆಲ್ಲಾ ನರಸಿಂಹಲು(39) ಎಂಬುವರನ್ನು ಟೆಲಿಗ್ರಾಂ ಆ್ಯಪ್ ಮೂಲಕ ಇಬ್ಬರು ಸಂಪರ್ಕಿಸಿ ಪಾರ್ಟ್‌ಟೈಮ್ ಜಾಬ್ ನೀಡುವುದಾಗಿ ನಂಬಿಸಿದ್ದಾರೆ. ವೆಬ್ ಸೈಟ್‌ವೊಂದರಲ್ಲಿ ರಿಜಿಸ್ಟರ್ ಆಗುವಂತೆ ಹೇಳಿ, ಕೆಲವು ಟಾಸ್ಕ್ ಸಹ ನೀಡಿದ್ದಾರೆ. ಹಂತ ಹಂತವಾಗಿ 10,53,068 ರೂ. ವರ್ಗಾವಣೆ ಮಾಡಿಕೊಂಡು ಚೆಲ್ಲಾ ನರಸಿಂಹಲುಗೆ ವಂಚಿಸಿದ್ದಾರೆ.
ರಾಜೀವ್ ನಗರದ ರೂಪೇಶ್, ಗೊನ್ಸಾಲ್ವೆ(36) ಎಂಬುವರನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿದ ವಂಚಕರು ಆನ್‌ಲೈನ್ ಟಾಸ್ಕ್ ಕಂಪ್ಲಿಟ್ ಮಾಡಿದ್ರೆ ಕಮಿಷನ್ ನೀಡುವುದಾಗಿ 5.25 ಲಕ್ಷ ರೂ. ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ. ಈ ಪ್ರತ್ಯೇಕ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂಓದಿ: ಜೈನ ಮುನಿ ಹತ್ಯೆ ಪ್ರಕರಣ: ಖುದ್ದು ಫೀಲ್ಡ್‌ಗಿಳಿದು ಸಿಐಡಿ ಡಿಜಿಪಿ ಡಾ ಎಂ ಎ ಸಲೀಂ ಪರಿಶೀಲನೆ..