ಮೈಸೂರು: ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಪತಿ ತನ್ನ ನಾದಿನಿಯ ಗಂಡನನ್ನು ಹತ್ಯೆಗೈದ ಘಟನೆ ನಗರದ ಕಾಕರವಾಡಿ (ಲಕ್ಷ್ಮಿಪುರಂ)ನಲ್ಲಿ ಶನಿವಾರ ನಡೆದಿದೆ. ಮೈಸೂರು ತಾಲೂಕು ಸರಕಾರಿ ಉತ್ತನಹಳ್ಳಿ ನಿವಾಸಿ ಗಾರೆ ಕೆಲಸಗಾರ ರಾಮಣ್ಣ (45) ಕೊಲೆಯಾದವರು. ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ನಿವಾಸಿ ಹಾಗೂ ನಿವೃತ್ತ ಸರ್ಕಾರಿ ನೌಕರ ಶಿವರುದ್ರ (62) ಕೊಲೆ ಆರೋಪಿ.
ಪ್ರಕರಣದ ಸಂಪೂರ್ಣ ವಿವರ: ಶಿವರುದ್ರ ಮತ್ತು ರಾಮಣ್ಣ ಕ್ರಮವಾಗಿ ಅಕ್ಕ ಮತ್ತು ತಂಗಿಯನ್ನು ಮದುವೆಯಾಗಿದ್ದರು. ಶಿವರುದ್ರ ಪತ್ನಿಯೊಂದಿಗೆ ರಾಮಣ್ಣ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ರಾಮಣ್ಣನ ಮೇಲೆ ಶಿವರುದ್ರ ದ್ವೇಷ ಬೆಳೆಸಿಕೊಂಡಿದ್ದ. ಕಾಕರವಾಡಿಯ ಉಸ್ಮಾನಿಯಾ ರಸ್ತೆಯ ಕಟ್ಟಡದಲ್ಲಿ ಶುಕ್ರವಾರ ರಾಮಣ್ಣ ಗಾರೆ ಕೆಲಸ ಮಾಡಲು ಬಂದಿದ್ದರು. ಅಲ್ಲಿಗೆ ಬಂದ ಶಿವರುದ್ರ ಜಗಳ ತೆಗೆದು ರಾಮಣ್ಣಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ.
ತೀವ್ರವಾಗಿ ಗಾಯಗೊಂಡಿದ್ದ ರಾಮಣ್ಣ ಅವರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಶೀಲ ಶಂಕಿಸಿ ಚಾಕುವಿನಿಂದ ಇರಿದು ಪತ್ನಿ ಕೊಂದ ಪತಿ
ಕೊಲೆ ಆರೋಪಿಗಳ ಬಂಧನ: ಪ್ರೀತಿಗೆ ಅಡ್ಡ ಬಂದನೆಂಬ ಕಾರಣಕ್ಕೆ ಪ್ರಿಯತಮೆಯ ಸೋದರನ್ನು ಕೊಲೆ ಮಾಡಿದ್ದ ಪ್ರಿಯಕರ ಸೇರಿದಂತೆ ಮೂವರನ್ನು ವಿಜಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳವಾಡಿ ನಿವಾಸಿ ಹೇಮಂತ್ ಅಲಿಯಾಸ್ ಸ್ವಾಮಿ (23) ಕೊಲೆಯಾದವರು. ಸಾಗರ್, ಮಂಜ ಅಲಿಯಾಸ್ ಕಪ್ಪೆ ಮಂಜ ಮತ್ತು ಪ್ರತಾಪ ಬಂಧಿತ ಆರೋಪಿಗಳು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಪತ್ನಿ ಶೀಲದ ಮೇಲೆ ಶಂಕೆ... ಅರಣ್ಯಕ್ಕೆ ಕರೆದೊಯ್ದು ಹೆಂಡತಿ, 3 ವರ್ಷದ ಮಗು ಕೊಲೆಗೈದ ಪತಿ
ಪ್ರಕರಣದ ವಿವರ: ಹೇಮಂತ್ ಸೋದರಿಯನ್ನು ಸಾಗರ್ ಪ್ರೀತಿಸುತ್ತಿದ್ದ. ಈ ವಿಚಾರ ಗೊತ್ತಾಗಿ ಎರಡು ಕುಟುಂಬದ ನಡುವೆ ಜಗಳವಾಗಿದೆ. ಗುರುವಾರ (ಜೂ 15) ಸಂಜೆ ಬೆಳವಾಡಿ- ಗದ್ದಿಗೆ ಮುಖ್ಯರಸ್ತೆಯ ಬಸವನಹಳ್ಳಿ ಬಳಿ ಹೇಮಂತ್ ಮತ್ತು ಸುಕಾಂತ್ ಬೈಕ್ನಲ್ಲಿ ಬೆಳವಾಡಿ ಕಡೆಗೆ ಬಂದಿದ್ದಾರೆ. ಸಾಗರ್, ಮಂಜ ಮತ್ತು ಪ್ರತಾಪ ಬೈಕಿನಲ್ಲಿ ಬಂದು ಹೇಮಂತ್‌ಗೆ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ. ಕೆಳಗೆ ಬಿದ್ದ ಹೇಮಂತ್‌ಗೆ ಚಾಕುವಿನಿಂದ ಇರಿದಿದ್ದಾರೆ. ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: ಪ್ರೀತಿಸುವಂತೆ ಕಾಟ: ಯುವಕನ ವರ್ತನೆಗೆ ಬೇಸತ್ತು SSLC ವಿದ್ಯಾರ್ಥಿನಿ ಆತ್ಮಹತ್ಯೆ!