ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪಾರಂಪರಿಕ ಗಡಿಯಾರದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದನ್ನು ಸರಿಪಡಿಸಲು ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ.
ನಗರದಲ್ಲಿ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ದೊಡ್ಡ ಗಡಿಯಾರ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ಬಗ್ಗೆ ನಿನ್ನೆ ತಜ್ಞರ ಸಮಿತಿ ದೊಡ್ಡ ಗಡಿಯಾರವನ್ನು ಪರಿಶೀಲನೆ ನಡೆಸಿದೆ. ಗಡಿಯಾರದಲ್ಲಿ ಬಿರುಕು ಬಿಟ್ಟಿರುವುದನ್ನು ಪರಿಪಾಲನಾ ಸಮಿತಿಯ ತಜ್ಞರು ಮೊದಲೇ ತಿಳಿಸಿದ್ದರು. ಈ ಕಟ್ಟಡದಲ್ಲಿ ಇಲಿ, ಹೆಗ್ಗಣಗಳು ಹೆಚ್ಚಾಗಿದ್ದು, ಇವು ವಾಸ ಮಾಡಲು ಬಿಲ ತೋಡುತ್ತಿವೆ. ಇದರಿಂದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದರು.
ದೊಡ್ಡ ಗಡಿಯಾರ ಮೊದಲು ಹೇಗೆ ಒಂದು ಗಂಟೆಗೆ ಶಬ್ದ ಮಾಡುತ್ತಿತ್ತೋ ಅದೇ ರೀತಿ ಸರಿಪಡಿಸುವಂತೆ ಸಾರ್ವಜನಿಕರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರಯತ್ನ ಮಾಡುತ್ತೇವೆ. ತಜ್ಞರು ಹೋಗಿ ಪರಿಶೀಲನೆ ನಡೆಸಿದ್ದು, ಅವರ ಸಲಹೆ ಸೂಚನೆಗಳನ್ನು ಪಡೆದು ತಕ್ಷಣವೇ ಬೇಕಾದ ಕಾಮಗಾರಿಗಳನ್ನು ಪ್ರಾರಂಭಿಸುತ್ತೇವೆ. ಅದನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು ಎಂಬ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.